ಮಂಡ್ಯ,ಮೇ26(Daijiworld News/AZM):ಇಂದು ಸುಮಲತಾ ಅಂಬರೀಶ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರನ್ನು ಭೇಟಿಯಾಗಲಿದ್ದಾರೆ.
ಮಂಡ್ಯದಲ್ಲಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ನೇರವಾಗಿ ಸುಮಲತಾಗೆ ಬೆಂಬಲ ಸೂಚಿಸಿತ್ತು. ಅಷ್ಟೇ ಅಲ್ಲ, ಸುಮಲತಾ ಪರ ಪ್ರಚಾರದಲ್ಲಿ ಬಿಜೆಪಿ ಕಾರ್ಯರ್ತರು ಪಾಲ್ಗೊಂಡಿದ್ದರು. ಮಂಡ್ಯ ಭಾಗದಲ್ಲಿ ಬಿಜೆಪಿ ಪ್ರಾಬಲ್ಯವೇನು ಹೊಂದಿಲ್ಲ. ಆದರೆ, ಸುಮಲತಾ ಪರ ಒಂದಷ್ಟು ಮತಗಳು ಬೀಳಲು ಬಿಜೆಪಿ ಬೆಂಬಲ ಸಹಕಾರಿಯಾಗಿತ್ತು. ಹಾಗಾಗಿ ಬಿಜೆಪಿಗೆ ಧನ್ಯವಾದ ಹೇಳುವ ನಿಟ್ಟಿನಲ್ಲಿ ಬೆಳಗ್ಗೆ ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಸುಮಲತಾ ತೆರಳಲಿದ್ದಾರೆ.
ಇನ್ನು ಸುಮಲತಾ ಅವರು ಬಿಜೆಪಿ ಸೇರುವ ಉದ್ದೇಶದಿಂದ ಬಿಎಎಸ್ವೈ ಅವರನ್ನು ಭೇಟಿ ಮಾಡುತ್ತಿದ್ದಾರೆ ಎನ್ನುವ ಮಾತಿದೆ. ಆದರೆ, ಈ ಮಾತು ಸತ್ಯಕ್ಕೆ ದೂರವಾಗಿದ್ದು, ಸುಮಲತಾ ಪತಿ ದಿವಂಗತ ಅಂಬರೀಶ್ ಅವರು ಕಾಂಗ್ರೆಸ್ಗಾಗಿ ದುಡಿದವರು. ಸುಮಲತಾಗೆ ಕಾಂಗ್ರೆಸ್ನಿಂದ ಟಿಕೆಟ್ ಸಿಕ್ಕಿರಲಿಲ್ಲ. ಹಾಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಆದರೆ, ಈಗ ಬಿಜೆಪಿಯಿಂದ ಬೆಂಬಲ ಸಿಕ್ಕಿದೆ ಎನ್ನುವ ಕಾರಣಕ್ಕೆ ಅವರು ಕಮಲ ಪಾಳಯ ಸೇರುವುದು ಅನುಮಾನ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ. ಹಾಗಾಗಿ, ಅವರು ಪಕ್ಷೇತರರಾಗಿಯೇ ಉಳಿದು ಕ್ಷೇತ್ರದ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ.