ಅಮೇಥಿ,ಮೇ26(Daijiworld News/AZM):ಸ್ಮೃತಿ ಇರಾನಿ ಅವರ ಆಪ್ತನನ್ನು ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಅಮೇಥಿಯಲ್ಲಿ ಶನಿವಾರ ರಾತ್ರಿ ನಡೆದಿದ್ದು, ಇಂದು ಪೊಲೀಸರು ಈ ಕುರಿತು ಮಾಹಿತಿ ನೀಡಿದ್ದಾರೆ.
ಅಮೇಥಿ ಜಿಲ್ಲೆಯ ಬರೌಲಿಯಾ ಗ್ರಾಮದ ಮುಖಂಡ ಸುರೇಂದ್ರ ಸಿಂಗ್(50) ಎಂಬುವರನ್ನು ಶನಿವಾರ ರಾತ್ರಿ 11.30ರಲ್ಲಿ ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ದಯಾ ರಾಮ್ ಹೇಳಿದ್ದಾರೆ.
ಸ್ಮೃತಿ ಇರಾನಿ ಅವರ ಗೆಲುವಿನ ಸಂಭ್ರಮಾಚರಣೆಗೆ ತೆರಳಿ ಮನೆಗೆ ವಾಪಾಸಾಗಿ ಮನೆಯ ಹೊರಗೆ ಮಲಗಿದ್ದ ವೇಳೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.