ಬೆಂಗಳೂರು,ಮೇ,26(Daijiworld News/AZM): ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಸುಮಲತಾ, “ಪಕ್ಷೇತರ ಅಭ್ಯರ್ಥಿ ಯಾವುದೇ ಪಕ್ಷ ಸೇರುವ ಅವಕಾಶ ನಮ್ಮ ಕಾನೂನಿನಲ್ಲಿ ಇಲ್ಲ. ಹಾಗಾಗಿ ನಾನು ಯಾವುದಾದರೂ ಒಂದು ಪಕ್ಷಕ್ಕೆ ಬೆಂಬಲ ನೀಡಬಹುದಷ್ಟೆ ಎಂದು ಹೇಳಿರುವ ಸುಮಲತಾ "ಸುನಾಮಿ ರೀತಿ ರಾಷ್ಟ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ನಾನು ವೈಯಕ್ತಿಕವಾಗಿ ಬಿಜೆಪಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ನನ್ನ ಗೆಲುವು ಒಂದು ರೀತಿ ಇತಿಹಾಸ. ಮಂಡ್ಯದ ಜನ ಇತಿಹಾಸ ಸೃಷ್ಟಿಸಿದ್ದಾರೆ. ಎಲ್ಲಾ ಪಕ್ಷದವರು ನನ್ನ ಕೈಜೋಡಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದ," ಎಂದು ಅವರು ಹೇಳಿದ್ದಾರೆ.
ಮಂಡ್ಯದಲ್ಲಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ನೇರವಾಗಿ ಸುಮಲತಾಗೆ ಬೆಂಬಲ ಸೂಚಿಸಿತ್ತು. ಅಷ್ಟೇ ಅಲ್ಲ, ಸುಮಲತಾ ಪರ ಪ್ರಚಾರದಲ್ಲಿ ಬಿಜೆಪಿ ಕಾರ್ಯರ್ತರು ಪಾಲ್ಗೊಂಡಿದ್ದರು. ಮಂಡ್ಯ ಭಾಗದಲ್ಲಿ ಬಿಜೆಪಿ ಪ್ರಾಬಲ್ಯವೇನು ಹೊಂದಿಲ್ಲ. ಆದರೆ, ಸುಮಲತಾ ಪರ ಒಂದಷ್ಟು ಮತಗಳು ಬೀಳಲು ಬಿಜೆಪಿ ಬೆಂಬಲ ಸಹಕಾರಿಯಾಗಿತ್ತು.