ಕೋಲ್ಕತ್ತ, ಸೆ.1(DaijiworldNews/AA): ಮಮತಾ ಬ್ಯಾನರ್ಜಿಗೆ ಪಶ್ಚಿಮ ಬಂಗಾಳದ ಸಿಎಂ ಆಗಿ ಮುಂದುವರಿಯುವ ಯಾವ ಹಕ್ಕೂ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್ ಅವರು ಇಂದು ತಿಳಿಸಿದ್ದಾರೆ.
ಕೇಂದ್ರ ಸಚಿವರೂ ಆಗಿರುವ ಸುಕಾಂತ, 'ಆಡಳಿತ ಯಂತ್ರ ವಿಫಲವಾಗಿದೆ. ಪೊಲೀಸ್ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಮಮತಾ ಬ್ಯಾನರ್ಜಿ ಅವರೇ ಇದಕ್ಕೆಲ್ಲಾ ಹೊಣೆ. ಹಾಗಾಗಿ, ಹುದ್ದೆಯಲ್ಲಿ ಮುಂದುವರಿಯುವ ಯಾವ ಹಕ್ಕನ್ನೂ ಅವರು ಹೊಂದಿಲ್ಲ. ಮಮತಾ ಬ್ಯಾನರ್ಜಿ ಅವರು ತಮ್ಮ ಸಿಎಂ ಹುದ್ದೆ ತೊರೆದರೆ ಬಂಗಾಳದ ಪಾಲಿಗೆ ಒಳಿತಾಗಲಿದೆ' ಎಂದು ತಿಳಿಸಿದರು.
ಬಿರ್ಭುಮ್ ಜಿಲ್ಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬ, ಚಿಕಿತ್ಸೆ ನೀಡುತ್ತಿದ್ದ ನರ್ಸ್ಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಶನಿವಾರ ರಾತ್ರಿ ವರದಿಯಾಗಿದೆ. ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಕೋಲ್ಕತ್ತದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣದ ಬೆನ್ನಲ್ಲೇ ಈ ಘಟನೆ ನಡೆದಿದೆ.
ಇನ್ನು ಬಿರ್ಭುಮ್ ಜಿಲ್ಲೆಯಲ್ಲಿ ಆಸ್ಪತ್ರೆಯ ಸಂತ್ರಸ್ತ ನರ್ಸ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಕಿಡಿಗೇಡಿ ತನ್ನ ಕುಟುಂಬದವರ ಸಮ್ಮುಖದಲ್ಲೇ ನನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡ. ಅವಾಚ್ಯ ಶಬ್ದಗಳಿಂದ ನಿಂದಿಸಿದ. ಸೂಕ್ತ ಭದ್ರತೆ ಇಲ್ಲದಿರುವುದಕ್ಕೆ ಇಂತಹ ಕೃತ್ಯಗಳು ಪದೇಪದೆ ವರದಿಯಾಗುತ್ತಿವೆ ಎಂದು ಕಿಡಿಕಾರಿದ್ದಾರೆ.