ಪಂಜಾಬ್, ಸೆ.2(DaijiworldNews/AA): ಯುಪಿಎಸ್ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಒಂದಾಗಿದ್ದು, ಈ ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣವಾಗುವುದು ಕಷ್ಟಸಾಧ್ಯವಾಗಿದೆ. ಹೀಗೆ ತನ್ನ ವೈದ್ಯ ವೃತ್ತಿ ತೊರೆದು, ಮೊದಲ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನವಜೋತ್ ಸಿಮಿ ಅವರ ಯಶೋಗಾಥೆ ಇದು.
ನವಜೋತ್ ಸಿಮಿ ಅವರು ಮೂಲತಃ ಪಂಜಾಬ್ನ ಗುರುದಾಸ್ಪುರದವರು. ಅವರು ತಮ್ಮ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ಪದವಿಯನ್ನು ಲುಧಿಯಾನದ ಬಾಬಾ ಜಸ್ವಂತ್ ಸಿಂಗ್ ಡೆಂಟಲ್ ಹಾಸ್ಪಿಟಲ್ ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ನಿಂದ ಪಡೆದರು. ಅವರು ದಂತವೈದ್ಯರಾಗಿ ಕೆಲಸ ಪ್ರಾರಂಭಿಸುತ್ತಾರೆ. ಬಳಿಕ ಅವರು ಯುಪಿಎಸ್ಸಿ ಪರೀಕ್ಷೆಗೆ ತಯಾರಾಗಲು ನಿರ್ಧರಿಸುತ್ತಾರೆ.
ನವಜೋತ್ ನಂತರ ದೆಹಲಿಯ ಹೆಸರಾಂತ ಸಂಸ್ಥೆಯಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆಯಲು ತರಬೇತಿ ಪಡೆದುಕೊಳ್ಳುತ್ತಾರೆ. ತಮ್ಮ ಮೊದಲ ಪ್ರಯತ್ನದಲ್ಲೇ ಅವರು 735 ನೇ ರ್ಯಾಂಕ್ನೊಂದಿಗೆ ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗುತ್ತಾರೆ. ಈ ಮೂಲಕ ಐಪಿಎಸ್ ಅಧಿಕಾರಿಯಾಗುತ್ತಾರೆ. ಪ್ರಸ್ತುತ ಅವರು ಪಾಟ್ನಾದ ಡಿಎಸ್ಪಿಯಾಗಿ ನೇಮಕಗೊಂಡಿದ್ದಾರೆ.
ನವಜೋತ್ ಅವರು ಐಎಎಸ್ ಅಧಿಕಾರಿಯಾಗಿರುವ ಜೊತೆಗೆ, ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂ ಹಾಗೂ ಟ್ವಿಟರ್ನಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಹಾಗೂ ಇದರಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾರೆ.
ಇನ್ನು ನವಜೋತ್ ಅವರು ಐಎಎಸ್ ತುಷಾರ್ ಸಿಂಗ್ಲಾ ಅವರನ್ನು ವಿವಾಹವಾಗಿದ್ದಾರೆ. 2015 ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 86 ನೇ ರ್ಯಾಂಕ್ ಪಡೆದು ಉತ್ತೀರ್ಣರಾಗಿದ್ದಾರೆ. ಅವರು ಪ್ರಸ್ತುತ ಬಿಹಾರದ ಬಂಕಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.