ಧಾರವಾಡ, ಮೇ26(Daijiworld News/SS): ಮೋದಿಯ ಮುಂದಿನ ಐದು ವರ್ಷಗಳಲ್ಲಿ ರಾಮಮಂದಿರ ನಿರ್ಮಾಣ ಆಗಬಹುದು ಎಂಬ ನಿರೀಕ್ಷೆ ನಮಗಿದೆ ಎಂದು ಉಡುಪಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳ ಸ್ವಾಮೀಜಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿಯವರು ಒಳ್ಳೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ವಿಜಯ ಸಾಧಿಸಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿಯಾಗಿದ್ದಕ್ಕೆ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ ಎಂದು ಹೇಳಿದರು.
ಈ ಬಾರಿ ಮೋದಿಯವರಿಗೆ ಪೂರ್ಣ ಬಹುಮತ ಬಂದಿದೆ. ಹೀಗಾಗಿ ಐದು ವರ್ಷಗಳಲ್ಲಿ ರಾಮಮಂದಿರ ನಿರ್ಮಾಣ ಆಗಬಹುದು ಎಂಬ ನಿರೀಕ್ಷೆಯೂ ಇದೆ. ಮೊದಲು ರಾಜ್ಯಸಭೆಯಲ್ಲಿ ಬಹುಮತ ಇರಲಿಲ್ಲ. ಆದರೆ ಈಗ ಅಲ್ಲಿಯೂ ಬಹುಮತ ಬಂದಿರುವುದರಿಂದ ಯಾವುದೇ ತೊಂದರೆ ಇಲ್ಲ. ಈ ಬಾರಿ ರಾಮ ಮಂದಿರ ವಿಚಾರವಾಗಿ ಸುಪ್ರೀಂಕೋರ್ಟ್ನಲ್ಲಿ ಪ್ರಕರಣ ಇತ್ಯರ್ಥ ಆಗಬೇಕು ಅಷ್ಟೇ ಎಂದು ಹೇಳಿದರು.
ಇದೇ ವೇಳೆ ರಾಜ್ಯ ಸರ್ಕಾರದ ಬಗ್ಗೆ ಮಾತನಾಡಲು ನಿರಾಕರಿಸಿದ ಅವರು, ಅಲ್ಲಿ ತುಂಬ ಒಳ ರಾಜಕೀಯ ಇದೆ. ಆ ಬಗ್ಗೆ ಏನೂ ಹೇಳಲ್ಲ ಎಂದು ಹೇಳಿದ್ದಾರೆ.