ಬೆಂಗಳೂರು, ಸೆ.2(DaijiworldNews/AA): ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಮಾನವೀಯ ದೃಷ್ಟಿಯಿಂದ ಕೆಲಸ ಮಾಡಬೇಕಿತ್ತು. ಸಾವಿರಾರು ಕೋಟಿ ಲೂಟಿ ಹೊಡೆಯುವ ಮೂಲಕ ದೊಡ್ಡ ಹಗರಣವನ್ನು ಸೃಷ್ಟಿಮಾಡಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ್ ಕಿಡಿಕಾರಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ನಾವು ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ ಕೊಟ್ಟಿದ್ದೇವೆ. ಅದು ನಮ್ಮ ಜವಾಬ್ದಾರಿ. ನಾನು ಇದಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಮಾತನಾಡಿದ್ದೇನೆ. ಕಳಪೆ ಮಟ್ಟದ ಉಪಕರಣಗಳ ಬಳಕೆ ಮಾಡಿದ್ದಾರೆ. ಕೆಲಸ ಮಾಡಬೇಕು ನಿಜ, ಲೂಟಿ ಹೊಡೆಯಬೇಕು ಎಂದಿಲ್ಲ ಆದರೆ ಸಾವು-ಬದುಕಿನ ಸಂದರ್ಭದಲ್ಲಿ ಲೂಟಿ ಹೊಡೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಫಿಕ್ಸ್ ಮಾಡಿದ ಹಣಕ್ಕಿಂತ ನಮ್ಮ ಮೆಡಿಕಲ್ ಆಸ್ಪತ್ರೆಯಲ್ಲಿ ಕಡಿಮೆ ಬೆಲೆಗೆ ಮಾಡಿದ್ದೀವಿ. ನಾವು ಒಂದು ಸಾವಿರಕ್ಕೆ ಗುಣಮಟ್ಟದ ಪಿಪಿಇ ಕಿಟ್ ಗಳನ್ನು ತಗೋತಿದ್ವಿ. ಆದರೆ ಸರ್ಕಾರ ಕಳಪೆ ಮಟ್ಟದ 150 ರೂ. ದನ್ನು ನಾಲ್ಕು ಪಟ್ಟು ಜಾಸ್ತಿ ದುಡ್ಡು ಕೊಟ್ಟು ಪಿಪಿಇ ಕಿಟ್ಗಳನ್ನು ಖರೀದಿ ಮಾಡಿದ್ದಾರೆ. ಕೊರೊನಾದಲ್ಲಿ ಮಾನವೀಯತೆ ಮೆರೆಯಬೇಕಿತ್ತು ಆದರೆ ಸಾವಿರಾರು ಕೋಟಿ ಲೂಟಿ ಹೊಡೆದು ದೊಡ್ಡ ಹಗರಣವನ್ನೇ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಹಗರಣದಲ್ಲಿ ಡಾ.ಕೆ ಸುಧಾಕರ್ ಭಾಗಿ ನಿಶ್ಚಿತವಾಗಿದೆ. ಆ ಸಮಯದಲ್ಲಿ ಮಂತ್ರಿ ಸ್ಥಾನದಲ್ಲಿದ್ದರೂ ಇದರ ಹೊಣೆಯನ್ನು ಅವರೇ ಹೊರಬೇಕಾಗುತ್ತದೆ. ನಾನು ರಿಪೋರ್ಟ್ ನೋಡಿಲ್ಲ, ಆದರೆ ನಿಶ್ಚಿತವಾಗಿ ಭಾಗಿಯಾಗಿದ್ದಾರೆ. ಬೋವಿ ನಿಗಮ, ಅಂಬೇಡ್ಕರ್ ನಿಗಮ, ಟ್ರಕ್ ಟರ್ಮಿನಲ್ ಬಹಳ ಹಗರಣಗಳಿವೆ. ಪಿಎಸ್ಐ ನೇಮಕಾತಿ ಸ್ಕ್ಯಾಮ್ ಎಲ್ಲವನ್ನು ತರಿಸಿಕೊಳ್ತೀವಿ. ಕ್ಯಾಬಿನೆಟ್ ಅನುಮತಿ ಇಲ್ಲದೇ ಬಹಳ ಭ್ರಷ್ಟಾಚಾರ ಮಾಡಿದ್ದಾರೆ. ಬಿಟ್ ಕಾಯಿನ್ ಮಾತ್ರವಲ್ಲ ಎಲ್ಲಾ ಹಗರಣಗಳ ತನಿಖೆಯಾಗಬೇಕು. ಎಲ್ಲವನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ತಿಳಿಸಿದ್ದಾರೆ.