ಲಕ್ನೋ, ಮೇ26(Daijiworld News/SS): ಸಂಸದೆ ಸ್ಮೃತಿ ಇರಾನಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದ ಬೆಂಬಲಿಗ ಸುರೇಂದ್ರ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟಿದ್ದಾರೆ.
ಸುರೇಂದ್ರ ಸಿಂಗ್ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸ್ಮೃತಿ ಇರಾನಿ ಪರ ನಿರಂತರವಾಗಿ ಪ್ರಚಾರ ನಡೆಸಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಪ್ರಚಾರ ಸಭೆಯ ವೇಳೆ ಸ್ಮೃತಿ ಇರಾನಿ ಅವರು ಸುರೇಂದ್ರ ಅವರ ಕಾರ್ಯವನ್ನು ಹಾಡಿಹೊಗಳಿದ್ದರು.
ಆದರೆ ಕೆಲ ದುಷ್ಕರ್ಮಿಗಳು ಸುರೇಂದ್ರ ಸಿಂಗ್ ಅವರ ಮೇಲೆ ಶನಿವಾರ ರಾತ್ರಿ ಗುಂಡಿನ ದಾಳಿ ನಡೆದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಆಸ್ಪತ್ರೆ ದಾಖಲು ಮಾಡುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಮೇಥಿಯ ಬರೌಲಿಯಾ ಗ್ರಾಮದಲ್ಲಿ ಸುರೇಂದ್ರ ಸಿಂಗ್ ಅವರ ಪಾರ್ಥಿವ ಶರೀರವನ್ನು ಮೆರವಣಿಗೆ ಮಾಡಲಾಯಿತು. ಈ ವೇಳೆ ಸಂಸದೆ ಸ್ಮೃತಿ ಇರಾನಿ ಅವರು ಶವಕ್ಕೆ ಹೆಗಲು ಕೊಟ್ಟು ಬಹು ದೂರದವರೆಗೆ ನಡೆದರು. ಸುರೇಂದ್ರ ಸಿಂಗ್ ಅವರ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.
ಘಟನೆ ಸಂಬಂಧ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಆದರೆ ಹತ್ಯೆ ಮಾಡಲು ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿಯೇ ಕೊಲೆ ಮಾಡಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.