ಉತ್ತರ ಪ್ರದೇಶ, ಸೆ.2(DaijiworldNews/AA): ತನ್ನ ಪ್ರೇಯಸಿಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಬಂದ ಪ್ರಿಯಕರನನ್ನು ಜನರು ಮಕ್ಕಳ ಕಳ್ಳನೆಂದು ಭಾವಿಸಿ ಹಿಗ್ಗಾಮುಗ್ಗ ಥಳಿಸಿದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದಿದೆ.
ಯುವಕನೊಬ್ಬ ಬುರ್ಖಾ ಧರಿಸಿ ತನ್ನ ಗೆಳತಿಯನ್ನು ಭೇಟಿಯಾಗಲು ಬಂದು ಸಾರ್ವಜನಿಕರ ಕೈಯಲ್ಲಿ ಧರ್ಮದೇಟು ತಿಂದಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈತ ಆಗಸ್ಟ್ 30 ರಂದು ಬುರ್ಖಾ ಧರಿಸಿ ಪ್ರೇಯಸಿಯನ್ನು ಭೇಟಿಯಾಗಲು ಬಂದಿದ್ದ. ಈ ವೇಳೆ ಆತನ ವಿಚಿತ್ರ ವರ್ತನೆಯನ್ನು ಗಮನಿಸಿ ಅನುಮಾನಗೊಂಡ ಸ್ಥಳೀಯರು ಆತ ಧರಿಸಿದ್ದ ಮುಖ ಗವಸು ತೆರೆದಿದ್ದಾರೆ.
ಈ ವೇಳೆ ಆತ ಯುವತಿ ಅಲ್ಲ ಯುವಕ ಎಂಬ ವಿಷಯ ಬೆಳಕಿಗೆ ಬಂದಿದೆ. ಬಳಿಕ ಆತ ಮಕ್ಕಳ ಕಳ್ಳನೆಂದು ಭಾವಿಸಿ ಸ್ಥಳೀಯರು ಹಿಗ್ಗಾಮುಗ್ಗ ಥಳಿಸಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಯುವಕ ವಿಚಾರಣೆಯ ವೇಳೆ ಯಾರಿಗೂ ಅನುಮಾನ ಬರಬಾರದೆಂದು ಗೆಳತಿಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಬಂದಿರುವುದಾಗಿ ತಿಳಿಸಿದ್ದಾನೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಚಿನ್ ಗುಪ್ತಾ ಎಂಬುವವರು ಈ ಕುರಿತ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಯುವಕನೊಬ್ಬ ಗೆಳತಿಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಬಂದು ಸ್ಥಳೀಯರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ. ಈತ ಮಕ್ಕಳ ಕಳ್ಳನೇ ಇರಬೇಕೆಂದು ಆಧಾರ್ ಕಾರ್ಡ್ ತೋರಿಸುವಂತೆ ಕೇಳಿದ್ದಾರೆ. ಆತ ಆಧಾರ್ ಕಾರ್ಡ್ ತೋರಿಸದೇ ಇದ್ದಾಗ, ಈತ ಯಾರೋ ಖತರ್ನಾಕ್ ಕಳ್ಳನೇ ಇರಬೇಕೆಂದು ಜನ ಆತನಿಗೆ ಹಿಗ್ಗಾಮುಗ್ಗಾ ಥಳಿಸಿರುವ ದೃಶ್ಯವನ್ನು ಕಾಣಬಹುದಾಗಿದೆ.