ನವದೆಹಲಿ, ಮೇ26(Daijiworld News/SS): ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಲಿದ್ದು, ಮೇ 30ರಂದು ಪದಗ್ರಹಣ ಸಮಾರಂಭ ನಡೆಯಲಿದೆ.
ಮೇ 30ರಂದು ಸಂಜೆ 7 ಗಂಟೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಸಂಪುಟದ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿಯನ್ನಾಗಿ ಶನಿವಾರ ನೇಮಕ ಮಾಡಿದ್ದಾರೆ. ಆಯ್ಕೆಯಾಗುವ ಸಚಿವರೊಂದಿಗೆ ನರೇಂದ್ರ ಮೋದಿಯವರು ಮೇ 30ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ರಾಜನಾಥ್ ಸಿಂಗ್, ಅಮಿತ್ ಶಾ, ಗಡ್ಕರಿ ಸೇರಿದಂತೆ ಇನ್ನು ಕೆಲ 'ಎ' ದರ್ಜೆಯ ನಾಯಕರುಗಳು ಸಚಿವರಾಗಿ ಪ್ರಮಾಣವಚನ ಸ್ವೀರಿಸುವ ಸಾಧ್ಯತೆಗಳಿವೆ.
ಈ ಬಾರಿಯ ನಮೋ ಪಟ್ಟಾಭಿಷೇಕಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಫ್ರಾನ್ಸ್ ಪ್ರಧಾನಿ ಇಮ್ಯಾನುಯೆಲ್ ಮ್ಯಾಕ್ರೋನ್ ಹಾಗೂ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾಗಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನರೇಂದ್ರ ಮೋದಿ, ರಾಷ್ಟ್ರಪತಿಯವರು ನನ್ನನ್ನು ಪ್ರಧಾನಿಯನ್ನಾಗಿ ನೇಮಕ ಮಾಡಿರುವ ಪ್ರಮಾಣಪತ್ರವನ್ನು ಇಂದು ನನಗೆ ನೀಡಿದ್ದಾರೆ. ಈ ದೇಶದ ಜನರು ಅಪಾರ ನಿರೀಕ್ಷೆಗಳೊಂದಿಗೆ ಪುನಃ ನನ್ನನ್ನು ಆಯ್ಕೆ ಮಾಡಿ ಆದೇಶ ನೀಡಿದ್ದಾರೆ. ನಮ್ಮ ಸರ್ಕಾರ ಒಂದೇ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ಜನರಿಗಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ.