ದೆಹಲಿ, ಸೆ.02 (DaijiworldNews/AK):ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿಕಟವರ್ತಿ ಬಿಭವ್ ಕುಮಾರ್ವರಿಗೆ ಸುಪ್ರೀಂಕೋರ್ಟ್ಇಂದು ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಎಲ್ಲಾ ಪ್ರಮುಖ ಸಾಕ್ಷಿಗಳನ್ನು ವಿಚಾರಣೆ ಮಾಡುವವರೆಗೆ ಕುಮಾರ್ ಅವರು ಸಿಎಂ ಆಪ್ತ ಕಾರ್ಯದರ್ಶಿ ಹುದ್ದೆಯನ್ನು ಪುನರಾರಂಭಿಸದಂತೆ, ಸಿಎಂ ನಿವಾಸಕ್ಕೆ ಪ್ರವೇಶಿಸದಂತೆ ಸುಪ್ರೀಂಕೋರ್ಟ್ ನಿರ್ಬಂಧ ಹೇರಿದೆ.
ಸಾಕ್ಷಿಗಳನ್ನು ಪರೀಕ್ಷಿಸುವವರೆಗೆ ಪ್ರಕರಣದ ವಿರುದ್ಧ ಮಾತನಾಡದಂತೆ ನ್ಯಾಯಾಲಯವು ಬಿಭವ್ ಕುಮಾರ್ ಗೆ ಸೂಚಿಸಿದೆ. ಈ ಪ್ರಕ್ರಿಯೆಯನ್ನು 3 ವಾರಗಳಲ್ಲಿ ಪೂರ್ಣಗೊಳಿಸಲು ನ್ಯಾಯಾಲಯವು ವಿಚಾರಣಾ ನ್ಯಾಯಾಲಯವನ್ನು ಕೇಳಿದೆ ಮತ್ತು ಯಾವುದೇ ಅಧಿಕೃತ ಸ್ಥಾನವನ್ನು ವಹಿಸಿಕೊಳ್ಳದಂತೆ ಕುಮಾರ್ ಅವರನ್ನು ನಿರ್ಬಂಧಿಸಿದೆ.
ಮೇ 18 ರಂದು ಬಂಧಿತರಾಗಿದ್ದ ಬಿಭವ್ ಕುಮಾರ್ಗೆ 100 ದಿನಗಳ ನಂತರ ಜಾಮೀನು ದೊರೆತಿದೆ. ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ನೀಡಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಮೇ 18 ರಂದು ಕೇಜ್ರಿವಾಲ್ ಅವರ ನಿವಾಸದಿಂದ ಕುಮಾರ್ ಅವರನ್ನು ಬಂಧಿಸಿದ್ದರು.