ದೆಹಲಿ, ಸೆ.03 (DaijiworldNews/AK):ಜೀವನದಲ್ಲಿ ಕಷ್ಟಗಳು ಸಾಮಾನ್ಯವಾಗಿ ಬರುತ್ತವೆ, ಆದರೆ ಆ ಕಷ್ಟಗಳಿಗೆ ಎದೆಗುಂದದೆ ತನ್ನ ಗುರಿಯತ್ತ ದೃಢವಾಗಿ ಸಾಗುವವನು ಮಾತ್ರ ಜೀವನದಲ್ಲಿ ಸಕ್ಸಸ್ ಕಾಣುತ್ತಾರೆ.ಸತತ ಛಲದಿಂದ ಯುಪಿಎಸ್ಸಿ ಪಾಸ್ ಮಾಡಿ ಐಎಎಸ್ ಅಧಿಕಾರಿಯಾಗಿದ್ದಾರೆ ರಿಷಿತಾ .
ದೆಹಲಿ ನಿವಾಸಿ ರಿಷಿತಾ ಕೂಡ ಅದನ್ನೇ ಸಾಬೀತುಪಡಿಸಿದ್ದಾರೆ, ಬಾಲ್ಯದಿಂದಲೂ ಅಪಾರ ಕನಸನ್ನು ಹೊಂದಿದ್ದ ರಿಷಿತಾಳಿಗೆ, ತನ್ನ ತಂದೆಯ ಅಕಾಲಿಕ ಮರಣ ಈ ಕನಸನ್ನು ಅವಳಿಂದ ಕಿತ್ತುಕೊಂಡಿತು. ಆದರೆ ಧೈರ್ಯಗೆಡದ ರಿಷಿತಾ ತನ್ನ ಗುರಿಯನ್ನು ಸಾಧಿಸಿಯೇ ಬಿಟ್ಟರು. ಇಂದು ಈಕೆ ಹಲವು ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.
ರಿಷಿತಾ ಗುಪ್ತಾ ಬೆಳೆದದ್ದು ದೆಹಲಿಯಲ್ಲಿ. ಅವರ ಕುಟುಂಬದ ಹಿನ್ನೆಲೆ ವ್ಯಾಪಾರ. ರಿಷಿತಾಗೆ ಬಾಲ್ಯದಿಂದಲೂ ವೈದ್ಯೆ ಆಗಬೇಕೆಂಬ ಆಸೆ. ಇದಕ್ಕಾಗಿ ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡರು.ಆದರೆ ಸೆಕೆಂಡ್ ಪಿಯುಸಿ ಬೋರ್ಡ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ, ಆಕೆಯ ತಂದೆಗೆ ಕ್ಯಾನ್ಸರ್ ಇರುವುದು ಗೊತ್ತಾಯಿತು. ಗೊತ್ತಾದ ಕೆಲವೇ ದಿನಗಳಲ್ಲಿ ರಿಷಿತಾ ತಂದೆ ಮರಣ ಹೊಂದಿದರು.
ಇದರಿಂದ ಶಾಕ್ಗೆ ಒಳಗಾದ ರಿಷಿತಾ ಚೇತರಿಸಿಕೊಳ್ಳಲು ತುಂಬಾ ಕಷ್ಟಪಟ್ಟರು. ದುರಾದೃಷ್ಟವಶಾತ್ ಅಧ್ಯಯನದತ್ತವೂ ಗಮನ ಹರಿಸಲು ಸಾಧ್ಯವಾಗಲಿಲ್ಲ ಮತ್ತು ಇದರಿಂದಾಗಿ ಅವಳು ವೈದ್ಯಕೀಯ ಕಾಲೇಜು ಪ್ರವೇಶ ಪರೀಕ್ಷೆಯಲ್ಲೂ ಫೇಲ್ ಆದರು.
ವೈದ್ಯೆಯಾಗಬೇಕೆಂಬ ಆಕೆಯ ಆಸೆ ಅಲ್ಲೇ ಅಂತ್ಯಕಂಡಿತು. ಆದರೆ ಛಲ ಬಿಡದ ರಿಷಿತಾ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿಯನ್ನು ಪಡೆಯಲು ನಿರ್ಧರಿಸಿದರು. ಈ ಪದವಿ ನಂತರ ರಿಷಿತಾ ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸಿದರು.ರಿಷಿತಾ ನಂತರ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಾಗಲು ಪ್ರಾರಂಭಿಸಿದರು. ಅವರು 2018 ರಲ್ಲಿ ಬರೆದ UPSC ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ 18ನೇ ರ್ಯಾಂಕ್ ಗಳಿಸುವ ಮೂಲಕ ಐಎಎಸ್ ಅಧಿಕಾರಿ ವೃತ್ತಿಯನ್ನು ಗಿಟ್ಟಿಸಿಕೊಂಡರು.