ಪುಣೆ, ಮೇ26(Daijiworld News/SS): ಪಕ್ಕದ ಮನೆಯವರು ಸಾಕಿರುವ ಹುಂಜ ಕೂಗುವಾಗ ನನ್ನ ನಿದ್ದೆಗೆ ಭಂಗವಾಗುತ್ತದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ ಪ್ರಸಂಗವೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.
ತಮ್ಮ ಮನೆಯ ಮುಂದಿನ ಮನೆಯವರು ಸಾಕಿರುವ ಹುಂಜ ನಿದ್ದೆ ಕೆಡಿಸುತ್ತದೆ ಎಂದು ಆರೋಪಿಸಿ ಪುಣೆಯ ಸೋಮವಾರ ಪೇಟೆ ಇಲಾಖೆಯಲ್ಲಿ ವಾಸಿಸುವ ಮಹಿಳೆಯೊಬ್ಬರು, ಸಮರ್ಥ ಪೊಲೀಸ್ ಠಾಣೆಗೆ ಬಂದಿದ್ದು ದೂರು ದಾಖಲಿಸಿ ಸಮಸ್ಯೆ ಪರಿಹರಿಸುವಂತೆ ಪೊಲೀಸರಲ್ಲಿ ಕೇಳಿಕೊಂಡಿದ್ದಾರೆ. .
ಮಹಿಳೆ ನೀಡಿದ ದೂರಿನ ಬಗ್ಗೆ ತನಿಖೆ ನಡೆಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ, ದೂರು ನೀಡಿದ ಮಹಿಳೆ ಆ ಮನೆಯಲ್ಲಿ ವಾಸಿಸುವುದಿಲ್ಲ. ಇದು ಅವರ ಸಹೋದರಿಯ ಮನೆಯಾಗಿದ್ದು, ಕೆಲವು ದಿನಗಳ ಕಾಲ ಅಲ್ಲಿ ತಂಗಿದ್ದ ಅವರು ದೂರು ನೀಡಿದ ಬಳಿಕ ಅಲ್ಲಿಂದ ತಮ್ಮೂರಿಗೆ ಹೊರಟು ಹೋಗಿದ್ದಾರೆ. ಹೀಗಾಗಿ ಯಾರ ವಿರುದ್ಧ ಕೂಡ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ.