ಶ್ರೀನಗರ, ಸೆ.3(DaijiworldNews/AA): ಜಮ್ಮುವಿನ ಸುಂಜ್ವಾನ್ ಸೇನಾ ಶಿಬಿರದಲ್ಲಿ ಯೋಧರೊಬ್ಬರು ನಿಗೂಢವಾಗಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. ಉಗ್ರರ ದಾಳಿಯಿಂದ ಯೋಧ ಹುತಾತ್ಮರಾಗಿರುವ ಸಂಶಯ ವ್ಯಕ್ತವಾಗಿದೆ.
ಸುಂಜ್ವಾನ್ ಮಿಲಿಟರಿ ಶಿಬಿರದಲ್ಲಿ ಯೋಧರನ್ನು ಸೆಂಟ್ರಿ ಡ್ಯೂಟಿಗಾಗಿ ನಿಯೋಜನೆ ಮಾಡಲಾಗಿತ್ತು. ನಿನ್ನೆ ಬೆಳಗ್ಗೆ ಗುಂಡೇಟಿನಿಂದ ಯೋಧ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಉಗ್ರರ ದಾಳಿಯಿಂದಾಗಿ ಯೋಧ ಸಾವನ್ನಪ್ಪಿರಬಹುದು ಎಂದು ಭಾರತೀಯ ಸೇನೆ ಶಂಕೆ ವ್ಯಕ್ತಪಡಿಸಿದೆ. ಈ ಹಿನ್ನೆಲೆ ಭಾರತೀಯ ಸೇನೆ ಹಾಗೂ ಪೊಲೀಸ್ ತಂಡ ಶೋಧ ಕಾರ್ಯಚರಣೆ ಪ್ರಾರಂಭಿಸಿದೆ. ಇದರೊಂದಿಗೆ ಡ್ರೋನ್ ಮತ್ತು ಹೆಲಿಕಾಪ್ಟರ್ ಮೂಲಕ ವೈಮಾನಿಕ ಕಣ್ಗಾವಲನ್ನು ನಿಯೋಜನೆ ಮಾಡಲಾಗಿದೆ.
ಉಗ್ರರು ಯೋಧನ ಮೇಲೆ ಗುರಿಯಿಡಲು ಸ್ನೈಪರ್ ಬಂದೂಕನ್ನು ಬಳಸಿದ್ದಾರೆ. ಬಳಿಕ ಘಟನಾ ಸ್ಥಳದಿಂದ ಪಲಾಯನ ಮಾಡಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನು ದಿನವಿಡೀ ಶೋಧಕಾರ್ಯ ಮುಂದುವರೆದಿದೆ. ಡ್ರೋನ್ ಮತ್ತು ಹೆಲಿಕಾಪ್ಟರ್ ಮೂಲಕ ಯಾವುದೇ ಶಂಕಿತ ಉಗ್ರಗಾಮಿಗಳ ಚಲನವಲನಗಳು ಕಂಡುಬಂದಿಲ್ಲ ಎಂದು ರಕ್ಷಣಾ ಮೂಲಗಳು ತಿಳಿಸಿದೆ.