ಮೈಸೂರು,ಸೆ.03 (DaijiworldNews/AK): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿದರು. ಈ ಸಭೆಗೆ ಯದುವಂಶದ ಪ್ರಮೋದಾದೇವಿ ಒಡೆಯರ್ ಮತ್ತು ರಾಜ, ಸಂಸದ ಯದುವೀರ್ ಒಡೆಯರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಭೆ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರ ಪ್ರಾಧಿಕಾರದ ಸಭೆ ನಿಯಮ ಬಾಹಿರವಾಗಿದೆ. ಪ್ರಾಧಿಕಾರದಿಂದ ನಮ್ಮ ನಂಬಿಕೆ, ಆಚರಣೆ ಪರಂಪರೆಗೆ ಧಕ್ಕೆ ಬರುತ್ತೆ. ನಮ್ಮ ಹಕ್ಕನ್ನು ನಾವು ಯಾವತ್ತೂ ಬಿಟ್ಟು ಕೊಡುವುದಿಲ್ಲ. ಬೆಟ್ಟವನ್ನು ನಿಯಂತ್ರಿಸಲು ಸರ್ಕಾರ ಪ್ರಾಧಿಕಾರ ರಚನೆ ಮಾಡುತ್ತಿದೆ. ಹುಂಡಿ ಹಣ ಆಯಾ ದೇವಸ್ಥಾನದ ಅಭಿವೃದ್ಧಿಗೆ ಬಳಕೆ ಆಗಬೇಕು. ಹಿಂದೂ ದೇವಾಲಯಗಳ ಮೇಲೆ ಏಕೆ ರೀತಿ ಮಾಡಲಾಗುತ್ತಿದೆ. ಪ್ರಾಧಿಕಾರ ರಚನೆಯಾದರೆ ನಮ್ಮ ಆಚರಣೆಗೂ ಬ್ರೇಕ್ ಬೀಳುತ್ತೆ. ಈ ಸಂಬಂಧ ಕಾನೂನು ಹೋರಾಟ ಮುಂದುವರಿಯಲಿದೆ ಎಂದು ಯುದುವೀರ್ ಸರ್ಕಾರ ನಡೆ ವಿರುದ್ದ ಕಿಡಿಕಾರಿದ್ದಾರೆ.
ತಡೆಯಾಜ್ಞೆ ನಡುವೆಯೂ ಸಭೆ ನಡೆಸುತ್ತಿರುವುದು ನ್ಯಾಯಾಂಗ ನಿಂದನೆ ಆಗುತ್ತದೆ. ನ್ಯಾಯಾಂಗ ನಿಂದನೆಗೆ ಒಳಪಡುವ ಸಭೆಗೆ ನಾನು ಹೋಗುವುದಿಲ್ಲ. ಪ್ರಾಧಿಕಾರ ರಚನೆ ಸಂಬಂಧ ಸೆಪ್ಟೆಂಬರ್ 5ರವರೆಗೆ ತಡೆಯಾಜ್ಞೆ ಇರುವುದು ಸತ್ಯ. ಮುಖ್ಯಮಂತ್ರಿಗಳು ಹೇಗೆ ತಡೆಯಾಜ್ಞೆ ತೆರವಾಗಿದೆ ಎಂದು ಹೇಳಿದರು ಗೊತ್ತಿಲ್ಲ ಎಂದು ನುಡಿದರು.
ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಆಕ್ಷೇಪ ವ್ಯಕ್ತಪಡಿಸಿ ಪ್ರಮೋದಾದೇವಿ ಒಡೆಯರ್ ಅವರು ಜುಲೈ 26 ರಂದು ತಡೆಯಾಜ್ಞೆ ತಂದಿದ್ದರು. ಈ ತಡೆಯಾಜ್ಞೆ ತೆರವುಗೊಳಿಸುವಂತೆ ಸರ್ಕಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.ಪ್ರಮೋದಾದೇವಿ ಒಡೆಯರ್ ಪರ ವಕೀಲರು ಮತ್ತೆ ಮಧ್ಯಂತರ ಆದೇಶವನ್ನು ನೀಡಬೇಕು ಎಂದು ಕೋರಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಒಡೆಯರ್ ಪರ ವಕೀಲರಿಗೆ ಸೂಚನೆ ನೀಡಿ, ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿದೆ.