ಬೆಂಗಳೂರು, ಸೆ.3(DaijiworldNews/AA): ಕರ್ನಾಟಕ ಸರ್ಕಾರ ಒಂದೇ ಒಂದೇ ವರ್ಷದಲ್ಲಿ ಅನೇಕ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದೆ. ಹೆಡ್ ಮಾಸ್ಟರ್ ಸಿದ್ದರಾಮಯ್ಯ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಇದು ನಾಚಿಕೆಗೇಡು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಿಡಿ ಕಾರಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಸಿಎಂ ರಾಮಕೃಷ್ಣ ಹೆಗಡೆಯವರ ಮೇಲೆ ಆರೋಪ ಬಂದಾಗ ಅವರು ರಾಜೀನಾಮೆ ನೀಡಿದ್ದರು. ಅದೇ ರೀತಿಯಾಗಿ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ಸವಾಲೆಸೆದರು.
ಮುಡಾದಲ್ಲಿ ದೊಡ್ಡ ಆಕ್ರಮ ಆಗಿದೆ. ಹೈಕಮಾಂಡ್ ಸಿದ್ದರಾಮಯ್ಯ ಅವರನ್ನ ಎರಡು ಬಾರಿ ಕರೆದು ವಿವರಣೆ ಕೇಳಿದೆ. ಈಗ ಮುಡಾ ಅಧಿಕಾರಿಯನ್ನ ಅಮಾನತು ಮಾಡಿದ್ದಾರೆ. ಸಿದ್ದರಾಮಯ್ಯ, ಕಾಂಗ್ರೆಸ್ನವರು ಏನು ತಪ್ಪಿಲ್ಲ ಎಂದಿದ್ದರು. ಹಾಗಾದರೆ ಈಗ ಯಾಕೆ ಅಧಿಕಾರಿ ಅಮಾನತು ಮಾಡಿದ್ದೀರಿ. ಮುಡಾ ಕೇಸ್ನಲ್ಲಿ ಹಗರಣ ಆಗಿಯೇ ಇಲ್ಲ ಎಂದವರು ಹಿಂದಿನ ಕಮಿಷನರ್ರನ್ನ ಯಾಕೆ ಅಮಾನತು ಮಾಡಿದ್ರಿ? ಇದರಿಂದ ಮುಡಾದಲ್ಲಿ ಹಗರಣ ಆಗಿರುವುದು ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
50:50 ಅನುಪಾತವೇ ಅಕ್ರಮ ಆಗಿದೆ ಅಂತ ಅಮಾನತು ಮಾಡಿದ್ದಾರೆ. ಇದಕ್ಕಿಂತ ಸಾಕ್ಷಿ ಬೇಕಾ? ಪದೇ ಪದೇ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ನವರು ಮಾತನಾಡುತ್ತಾರೆ. ತನಿಖೆಗೆ ಮಾತ್ರ ರಾಜ್ಯಪಾಲರು ಆದೇಶ ಮಾಡಿದ್ರು. ಕಾಂಗ್ರೆಸ್ ಅವರು ಏನು ತಪ್ಪೇ ಮಾಡಿಲ್ಲ ಎಂದ ಮೇಲೂ ಆಯೋಗ ಯಾಕೆ ಮಾಡಿದ್ರಿ? ಸಿಎಂ ಮೇಲೆ ಆರೋಪ ಬಂದಿದೆ. ಅವರೇ ಆಯೋಗ ರಚನೆ ಮಾಡೋಕೆ ಅಧಿಕಾರ ಇದೆಯಾ? ಅವರ ಮೂಗಿನ ನೇರಕ್ಕೆ ಆಯೋಗ ರಚನೆ ಮಾಡೋದಾ? ಇಲ್ಲಿ ಸ್ಪಷ್ಟವಾಗಿ ಹಗರಣ ಆಗಿದೆ. ಕೋರ್ಟ್ ಕೂಡಾ ಎಲ್ಲಾ ನೋಡುತ್ತಿದೆ. ಜನರ ಹಣ ಉಳಿಸೋ ಕೆಲಸ ಕೋರ್ಟ್ ಮಾಡೋ ವಿಶ್ವಾಸ ನಮಗಿದೆ ಎಂದು ಹೇಳಿದರು.