ಬೆಂಗಳೂರು,ಮೇ26(DaijiworldNews/AZM): ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಸುರಿದ ಸಿಡಿಲು ಸಹಿತ ಭಾರೀ ಮಳೆಗೆ ಮೂವರು ಬಲಿಯಾಗಿದ್ದಾರೆ.
ಚಿದಾನಂದ ಕೃಷ್ಣಪ್ಪ ಹಳೇಗೌಡರ್(48),ಕುರಿಗಾಹಿ ಆನಂದ್(33) ಹಾಗೂ ವಿರೂಪಾಕ್ಷ ಸಿಡಿಲು ಬಡಿದು ಮೃತಪಟ್ಟವರಾಗಿದ್ದಾರೆ. ಹಾವೇರಿಯ ರಾಣೆಬೆನ್ನೂರಿನ ಗಂಗಾಪುರದಲ್ಲಿ ಹೊಲದಲ್ಲಿ ಕೆಲಸ ಮಾಡಿ ಮನೆಗೆ ಮರಳುತ್ತಿದ್ದ ಚಿದಾನಂದ ಕೃಷ್ಣಪ್ಪ ಹಳೇಗೌಡರ್(48) ಸಿಡಿಲು ಬಡಿದು ಮೃತಪಟ್ಟಿದ್ಧಾರೆ. ಹಾಗೆಯೇ, ಚಿತ್ರದುರ್ಗದ ಹಿರಿಯೂರು ತಾಲೂಕಿನ ಆದಿವಾಲ ಗೊಲ್ಲರಹಟ್ಟಿಯಲ್ಲಿ ಕುರಿಗಳನ್ನು ರೊಪ್ಪಕ್ಕೆ ಕೂಡುವಾಗ ಕುರಿಗಾಹಿ ಆನಂದ್(33) ಕೂಡ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ದಾವಣಗೆರೆಯ ನ್ಯಾಮತಿ ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ವಿರೂಪಾಕ್ಷಪ್ಪ(45) ಎಂಬುವವರೂ ಕೂಡ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ವಿರೂಪಾಕ್ಷಪ್ಪ ಕುಟುಂಬದವರಿಗೆ ಸಾಂತ್ವನ ಹೇಳಿದ್ದು, ಸರಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ಬೆಂಗಳೂರು, ರಾಮನಗರ, ಚಿಕ್ಕಬಳ್ಳಾಪುರ, ಆನೇಕಲ್, ತುಮಕೂರು, ಚಿತ್ರದುರ್ಗ, ಹಾವೇರಿ ಮೊದಲಾದ ಕಡೆ ಭಾರೀ ಮಳೆಯಾಗಿದೆ. ಮಳೆ ಗಾಳಿ ಗುಡುಗು ಸಿಡಿಲಿಗೆ ಜನಜೀವನ ತಲ್ಲಣಗೊಂಡಿದೆ.