ಬೆಂಗಳೂರು, ಸೆ.4(DaijiworldNews/AA): ನಗರದ ರಾಮೇಶ್ವರಂ ಕೆಫೆ ಸ್ಫೋಟ ಕೇಸ್ನ ಉಗ್ರ ತಮಿಳುನಾಡಿನಲ್ಲಿ ತರಬೇತಿ ಪಡೆದಿದ್ದ ಎಂಬ ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಈ ಕುರಿತು ಶೋಭಾ ಕರಂದ್ಲಾಜೆ ಅವರು ಮದ್ರಾಸ್ ಹೈಕೋರ್ಟ್ ನಲ್ಲಿ ತಮಿಳುನಾಡಿನ ಜನರ ಕ್ಷಮೆ ಕೇಳಿದ್ದಾರೆ.
ಶೋಭ ಕರಂದ್ಲಾಜೆ ನೀಡಿದ್ದ ಹೇಳಿಕೆಗೆ ತಮಿಳುನಾಡು ಸರ್ಕಾರ ಸೇರಿದಂತೆ ಅಲ್ಲಿನ ಜನಪ್ರತಿನಿಧಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಕೂಡ ಸಲ್ಲಿಸಲಾಗಿತ್ತು. ಇಂದು ಆ ಅರ್ಜಿಯ ವಿಚಾರಣೆ ನಡೆದಿದೆ. ಶೋಭಾ ಪರ ವಾದ ಮಂಡಿಸಿದ ವಕೀಲರು, ಸಚಿವರ ಹೇಳಿಕೆಗೆ ಸಂಬಂಧಿಸಿ ತಮಿಳುನಾಡು ಜನರ ಕ್ಷಮೆ ಕೇಳಿರುವುದಾಗಿ ಅಫಿಡವಿಟ್ ಸಲ್ಲಿಸಿದ್ದಾರೆ. ಬಳಿಕ ತಮಿಳುನಾಡಿನ ಮುಖ್ಯ ಪಬ್ಲಿಕ್ ಪ್ರಾಸಿಕ್ಯೂಟರ್, ಸರ್ಕಾರದಿಂದ ಸೂಕ್ತ ಸೂಚನೆ ಪಡೆದ ನಂತರ ತಿಳಿಸುವೆ ಎಂದಿದ್ದಾರೆ.
ನ್ಯಾ. ಜಿ. ಜಯಚಂದ್ರನ್ ನೇತೃತ್ವದ ನ್ಯಾಯಪೀಠದೆದುರು ಪ್ರಮಾಣ ಪತ್ರ ಸಲ್ಲಿಸಿರುವ ಶೋಭಾ ಕರಂದ್ಲಾಜೆ ಅವರು, ತಮಿಳುನಾಡಿನ ಇತಿಹಾಸ, ಶ್ರೀಮಂತ ಸಂಸ್ಕೃತಿ, ಸಂಪ್ರದಾಯ ಮತ್ತು ಜನರ ಬಗ್ಗೆ ನನಗೆ ಹೆಚ್ಚಿನ ಗೌರವ ಇದೆ. ತಮಿಳುನಾಡಿನ ಜನರ ಭಾವನೆಗಳನ್ನು ನೋಯಿಸುವ ಯಾವುದೇ ಉದ್ದೇಶ ನನ್ನದಾಗಿರಲಿಲ್ಲ. ಆದ್ದರಿಂದ, ನನ್ನ ಹೇಳಿಕೆಯಿಂದ ಯಾವುದೇ ನೋವನ್ನು ಉಂಟು ಮಾಡಿದ್ದಕ್ಕಾಗಿ ನಾನು ಮತ್ತೊಮ್ಮೆ ತಮಿಳುನಾಡಿನ ಜನತೆಯ ಬಳಿ ಕ್ಷಮೆಯಾಚಿಸುತ್ತೇನೆ. ನ್ಯಾಯದ ಹಿತಾಸಕ್ತಿಯಿಂದ ಈ ಹೇಳಿಕೆ ನೀಡಿದ್ದೇನೆ, ಹಾಗಂತ ಉದ್ದೇಶಿತವಲ್ಲ ಎಂದು ತಿಳಿಸಿದ್ದಾರೆ.
ಇನ್ನು ನಾನು ತಮಿಳುನಾಡು ಜನರ ಕುರಿತು ನೀಡಿದ್ದ ಹೇಳಿಕೆಯಲ್ಲಿ ಯಾರದೇ ಭಾವನೆಗಳಿಗೆ ಘಾಸಿಯುಂಟು ಮಾಡುವ ಉದ್ದೇಶವಿರಲಿಲ್ಲ. ನಾನು ಈಗಾಗಲೇ ನನ್ನ ಹೇಳಿಕೆಯನ್ನು ಹಿಂಪಡೆದಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಈಗಾಗಲೇ ಕ್ಷಮಾಪಣೆ ಕೋರಿದ್ದೇನೆ ಎಂದೂ ಪ್ರಮಾಣ ಪತ್ರದಲ್ಲಿ ತಿಳಿಸಿದ್ದರು. ಇನ್ನು ಕೋರ್ಟ್ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿದೆ ಆದೇಶ ಹೊರಡಿಸಿದೆ.