ಬೆಂಗಳೂರು, ಸೆ.4(DaijiworldNews/AA): ರಾಜ್ಯದಲ್ಲಿ ಡೆಂಗ್ಯೂ ಜ್ವರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಡೆಂಗ್ಯೂವನ್ನು ಸಾಂಕ್ರಾಮಿಕ ರೋಗವೆಂದು ಅಧಿಕೃತವಾಗಿ ಘೋಷಿಸಿದೆ.
ಈ ಸಂಬಂಧ ಅಧಿಸೂಚನೆ ಪ್ರಕಟಿಸಲಾಗಿದ್ದು, ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020 ಕ್ಕೆ ತಿದ್ದುಪಡಿ ತರಲಾಗಿದೆ. ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಡೆಂಗ್ಯೂ ಸಾಂಕ್ರಾಮಿಕ ರೋಗವನ್ನಾಗಿ ಘೋಷಿಸುವುದರ ಜೊತೆಗೆ ಡೆಂಘಿ ನಿಯಂತ್ರಣ ಮಾರ್ಗಸೂಚಿಗಳನ್ನು ಪಾಲಿಸದವರಿಗೆ ದಂಡ ಕೂಡ ಹಾಕಲಾಗುವುದು ಎಂದು ತಿಳಿಸಿದ್ದಾರೆ.
ಡೆಂಗ್ಯೂ ಸೊಳ್ಳೆ ಉತ್ಪತ್ತಿ ತಾಣಗಳನ್ನ ಹತೋಟಿಗೆ ತರುವ ನಿಟ್ಟಿನಲ್ಲಿ ಕಾನೂನಿನ ಅಸ್ತ್ರ ಬಳಸಬಹುದಾಗಿದೆ. ಈ ಹಿಂದೆ ಬೆಂಗಳೂರು ಮತ್ತು ಮಂಗಳೂರು ಬಿಟ್ಟರೆ ರಾಜ್ಯದ ಬೇರೆ ಪ್ರದೇಶಗಳಲ್ಲಿ ಕಾನೂನಿನ ರೀತಿ ಕ್ರಮ ಕೈಗೊಳ್ಳಲು ಅವಕಾಶ ಇರಲಿಲ್ಲ. ಈಗ ರಾಜ್ಯಾದ್ಯಂತ ವಿಸ್ತರಣೆಯಾಗಿದೆ ಎಂದು ಹೇಳಿದ್ದಾರೆ.
ಡೆಂಗ್ಯೂ ಮಾರ್ಗಸೂಚಿಗಳನ್ನ ಪಾಲಿಸದಿದ್ದರೆ, ಗ್ರಾಮೀಣ ಪ್ರದೇಶದ ಮನೆಗಳಿಗೆ 200 ರೂಪಾಯಿ ಹಾಗೂ ನಗರ ಪ್ರದೇಶಗಳಲ್ಲಿ 400 ರೂಪಾಯಿ ದಂಡ ವಿಧಿಸಲಾಗುವುದು. ಅಲ್ಲದೇ ಶಾಲಾ ಕಾಲೇಜು, ಹೋಟೆಲ್, ಲಾಡ್ಜ್, ರೆಸಾರ್ಟ್ಗಳು ಸೇರಿದಂತೆ ವಾಣಿಜ್ಯ ಸಂಘ, ಸಂಸ್ಥೆಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ 500 ಹಾಗೂ ನಗರ ಪ್ರದೇಶಗಳಲ್ಲಿ 1,000 ರೂ. ದಂಡ ನಿಗದಿಪಡಿಸಲಾಗಿದೆ. ಕಟ್ಟಡ ನಿರ್ಮಾಣ, ಹೊರಾಂಗಣ ಸ್ಥಳಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ಒಂದು ಸಾವಿರ ಹಾಗೂ ನಗರ ಪ್ರದೇಶಗಳಲ್ಲಿ 2,000 ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಿದರು.