ಪುಣೆ,ಮೇ26(DaijiworldNews/AZM): ವಿಚಾರವಾದಿ ನರೇಂದ್ರ ದಾಭೋಲ್ಕರ್ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನಾಶಕ್ಕೆ ನೆರವು ನೀಡಿದ ಆರೋಪದ ಮೇಲೆ ಜೂನ್ 1ರವರೆಗೆ ಬಂಧಿತರಾಗಿರುವ ವಕೀಲ ಮತ್ತು ಬಲ ಪಂಥೀಯ ಕಾರ್ಯಕರ್ತ ಇಬ್ಬರನ್ನು ಸಿಬಿಐ ಕಸ್ಟಡಿಗೆ ಒಪ್ಪಿಸಿ ಪುಣೆ ನ್ಯಾಯಾಲಯ ಆದೇಶ ಹೊರಡಿಸಿದೆ.
ನರೇಂದ್ರ ದಾಭೋಲ್ಕರ್
ವಕೀಲ ಸಂಜೀವ್ ಪುನಲೇಕರ್ ಮತ್ತು 'ಸನಾತನ ಸಂಸ್ಥಾ' ಸಂಘಟನೆಯ ಸದಸ್ಯ ವಿಕ್ರಮ್ ಭಾವೆ ಅವರನ್ನು ಶನಿವಾರ ಬಂಧಿಸಿದ್ದ ಕೇಂದ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಭಾನುವಾರ ಪುಣೆಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್.ಎನ್.ಸೋನಾವಾನೆ ಮುಂದೆ ಹಾಜರು ಪಡಿಸಿದ್ದರು. ''ಬಂಧಿತರಿಬ್ಬರೂ ಹಂತಕರ ಜತೆ ಸಂಪರ್ಕದಲ್ಲಿದ್ದು, ಕೆಲವು ಮಹತ್ವದ ಸಾಕ್ಷ್ಯಗಳನ್ನು ನಾಶಪಡಿಸಲು ನೆರವಾಗಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ,'' ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.
ಮೂಢನಂಬಿಕೆ ವಿರೋಧಿ ಆಂದೋಲನದ ನೇತಾರ ದಾಭೋಲ್ಕರ್ ಅವರನ್ನು 2013, ಆಗಸ್ಟ್ 20ರಂದು ವಾಯು ವಿಹಾರ ನಡೆಸುತ್ತಿದ್ದಾ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು.
ದಾಭೋಲ್ಕರ್ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಬಳಸಿದ್ದ ಶಸ್ತ್ರಾಸ್ತ್ರಗಳನ್ನು ನಾಶಪಡಿಸುವಂತೆ ಪ್ರಕರಣದ ಶೂಟರ್ಗಳಲ್ಲಿ ಒಬ್ಬನಾದ ಶರದ್ ಕಲಸ್ಕರ್ಗೆ ಪುನಲೇಕರ್ ಸಲಹೆ ಮಾಡಿದ್ದ. ಆ ಪ್ರಕಾರ ಹಂತಕರು ನಡೆದುಕೊಂಡು ತನಿಖೆ ದಾರಿ ತಪ್ಪಿಸಲು ಯತ್ನಿಸಿದ್ದಾರೆ ಎಂದು ಕೋರ್ಟ್ಗೆ ತಿಳಿಸಲಾಗಿದೆ.