ಬೆಂಗಳೂರು, ಸೆ.05 (DaijiworldNews/AK):ಉತ್ತಮ ಶಿಕ್ಷಕರ ಆಯ್ಕೆ ವಿಚಾರದಲ್ಲಿ ಸರಕಾರಕ್ಕೆ ದೂರು ಕೊಟ್ಟದ್ದು ಯಾರು? ಎಸ್ಡಿಪಿಐ ನವರು ದೂರು ಕೊಟ್ಟಿದ್ದಾರೆ. ಎಸ್ಡಿಪಿಐ ಕೇಳಿ ಈ ಸರಕಾರ ನಡೆಯುತ್ತದೆಯೇ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರಿಸಿದರು. ಯಾರನ್ನೋ ಓಲೈಕೆ ಮಾಡುವ ಕಾರಣಕ್ಕೆ ಇವತ್ತು ಪ್ರಶಸ್ತಿ ತಡೆಹಿಡಿಯುವ ಕ್ರಮ ಕೈಗೊಂಡಿದ್ದು ಸರಿಯಲ್ಲ; ಶಾಲೆಗಳು ಪವಿತ್ರ ಸ್ಥಳಗಳು. ಮಕ್ಕಳ ಮನಸ್ಸಿನಲ್ಲಿ ಇಂಥ ಕುಚೋದ್ಯತನ ಹುಟ್ಟುಹಾಕುವ ಕೆಲಸ ಮಾಡಬಾರದು ಎಂದು ತಿಳಿಸಿದರು.
ಹನುಮಾನ್ ವಿಚಾರದಲ್ಲೂ ಎಸ್ಡಿಪಿಐ ದೂರು ನೀಡಿತ್ತು. ನೀವು ಆದೇಶ ಮಾಡಿಬಿಟ್ಟಿರಿ. ಆದೇಶ ಮಾಡಲು ನಿಮಗೆ ಅಧಿಕಾರ ಕೊಟ್ಟಿದ್ದು ಯಾರು ಎಂದು ಕೇಳಿದರು. ಒಬ್ಬ ತಹಶೀಲ್ದಾರರಿಗೆ ಅದನ್ನು ಮಾಡಲು ಅಧಿಕಾರ ಇದೆಯೇ ಎಂದು ಪ್ರಶ್ನೆ ಮುಂದಿಟ್ಟರು. ಮತ್ತೆ ಆದೇಶ ವಾಪಸ್ ಪಡೆದಿರಿ. ಯಾಕೆ ಎಂದರಲ್ಲದೆ, ಅಲ್ಲಿ ಶಾಂತಿ ಕದಡುವ ವಾತಾವರಣ ಸೃಷ್ಟಿ ಆಗುತ್ತಿತ್ತು; ಜನ ನಿಮಗೆ ಛೀಮಾರಿ ಹಾಕಲು ಪ್ರಾರಂಭಿಸಿದ್ದರು. ವಾಪಸ್ ಪಡೆದಿರಿ ಅಲ್ಲವೇ ಎಂದರು. ತಹಶೀಲ್ದಾರರನ್ನು ಸಸ್ಪೆಂಡ್ ಮಾಡಲು ಒತ್ತಾಯಿಸಿದರು.
ಇಂಥವೆಲ್ಲ ಮಾಡುತ್ತಿದ್ದರೆ ಈ ರಾಜ್ಯವನ್ನು ಕಾಪಾಡುವವರು ಯಾರು? ನಾವು ಇರಬಹುದು; ನೀವು ಇರಬಹುದು, ಯಾರೇ ಇರಬಹುದು, ಸ್ವಲ್ಪ ದಿನಕ್ಕೆ ಅಧಿಕಾರದಲ್ಲಿ ಇರುತ್ತೇವೆ. ಆದರೆ, ಸಾಂವಿಧಾನಿಕ ವ್ಯವಸ್ಥೆ ಬಿಟ್ಟು ನೀವೇನೇ ಮಾಡಿದರೂ ಕೂಡ ಶಾಂತಿ ಕದಡುವ ವಾತಾವರಣ ಸೃಷ್ಟಿ ಆಗುತ್ತದೆ. ಅಂಥ ಕೆಲಸ ಮಾಡದಿರಿ ಎಂದು ಒತ್ತಾಯಿಸಿದರು.