ನವದೆಹಲಿ, ಸೆ.6(DaijiworldNews/AK): ಭಾರತ ಇಂದು ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಅಗ್ಗದ ದರದಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತ ಶಕ್ತಿ ಪರಿವರ್ತನಾ ಶೃಂಗಸಭೆಯನ್ನುದ್ದೇಶಿಸಿ ಅವರು ಮಾತನಾಡಿ, ಜಾಗತಿಕವಾಗಿ ಇಂಧನ ಕ್ಷೇತ್ರದಲ್ಲಿ ಶುದ್ಧ ಮತ್ತು ಸುಸ್ಥಿರ ಇಂಧನಕ್ಕಾಗಿ ಭಾರತ ಪ್ರಭಾವಶಾಲಿ ಹೆಜ್ಜೆಯನ್ನಿಟ್ಟಿದೆ. ಆರ್ಥಿಕತೆ ಜೊತೆಗೆ ಪರಿಸರ ಕಾಳಜಿ, ನಿರ್ವಹಣೆಗೂ ಮಹತ್ವ ನೀಡಿದೆ ಎಂದು ಹೇಳಿದರು.
ಸೌರ ವಿದ್ಯುತ್ ಸ್ಥಾವರ ಸುಂಕ ಶೇ.76 ಇಳಿಕೆ: ಸೌರ ವಿದ್ಯುತ್ ಉತ್ಪಾದನೆಗೆ ಉತ್ತೇಜನ ನೀಡಲೆಂದು ಭಾರತ ಸರ್ಕಾರ ಗ್ರಿಡ್ ಸಂಪರ್ಕಿತ ಸೌರ ವಿದ್ಯುತ್ ಸ್ಥಾವರಗಳಿಗೆ ಇದ್ದ ಸುಂಕವನ್ನು ಶೇ.76ರಷ್ಟು ಇಳಿಸಿದೆ. 2010-11ರಲ್ಲಿ ರೂ.10.95 ಇದ್ದ ಸುಂಕ 2023-24 ರ ಅವಧಿಯಲ್ಲಿ ಕೇವಲ ರೂ.2.60ಗೆ ಇಳಿಸಲಾಗಿದೆ ಎಂದು ತಿಳಿಸಿದರು.