ನವದೆಹಲಿ, ಸೆ.6(DaijiworldNews/AA): ಆರ್ಥಿಕ ಅವ್ಯವಹಾರಗಳ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿದ ಕೋಲ್ಕತ್ತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಆರ್ಜಿ ಕಾರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.

ಇಂದು ಸಂದೀಪ್ ಘೋಷ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ತನಿಖೆಯನ್ನು ವರ್ಗಾವಣೆ ಮಾಡುವಂತೆ ಕೋರಿ ಸಲ್ಲಿಸಿರುವ ಮನವಿಯನ್ನು ತಿರಸ್ಕರಿಸಿದೆ.
ಸಂದೀಪ್ ಘೋಷ್ ಪರ ವಾದ ಮಂಡಿಸಿದ ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಅವರು, ಅರ್ಜಿದಾರರು ವಿಚಾರಣೆಗೆ ಆಕ್ಷೇಪಣೆ ಸಲ್ಲಿಸುತ್ತಿಲ್ಲ. ಆದರೆ ಹೈಕೋರ್ಟ್ ಮಾಡಿದ ಕೆಲವು ಪ್ರತಿಕೂಲ ಹೇಳಿಕೆಗಳಿಂದ ಅಸಮಾಧಾನಗೊಂಡಿದ್ದಾರೆ. ಆ.9 ರಂದು ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆಯೊಂದಿಗೆ ಆರೋಪಿತ ಅಕ್ರಮಗಳನ್ನು ಜೋಡಿಸುವ ಹೈಕೋರ್ಟ್ನ ಕಲ್ಪನೆ ಬಗ್ಗೆ ಆಕ್ಷೇಪವಿದೆ. ಎರಡು ಪ್ರಕರಣಗಳನ್ನು ಪ್ರತ್ಯೇಖವಾಗಿ ತನಿಖೆ ನಡೆಸಬೇಕು ಎಂದು ಅವರು ಪ್ರತಿಪಾದಿಸಿದರು.
ವಿದ್ಯಾರ್ಥಿನಿ ಕೊಲೆ ಮತ್ತು ಕಾಲೇಜಿನಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಎರಡೂ ಪ್ರಕರಣಗಳ ಸಂಬಂಧ ತನಿಖಾ ವರದಿಯನ್ನು ಸಲ್ಲಿಸುವಂತೆ ಸಿಬಿಐಗೆ ನ್ಯಾಯಪೀಠ ಸೂಚನೆ ನೀಡಿದೆ.