ಬೆಂಗಳೂರು, ಸೆ.9(DaijiworldNews/AA): ಈ ದೀಪಾವಳಿಯಲ್ಲಿ ಸಿಎಂಗೆ ಬಾಂಬ್, ಆಟಂ ಬಾಂಬ್, ರಾಕೆಟ್ ಬಾಂಬ್ ಯರ್ಯಾರಿಟ್ಟಿದ್ದಾರೋ ಗೊತ್ತಿಲ್ಲ. ಆದರೆ ಆ ಬಾಂಬ್ ಸಿಡಿಯೋದಂತೂ ಖಚಿತ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಹುದ್ದೆಗೆ ನಡೆಯುತ್ತಿರುವ ಪೈಪೋಟಿ ಬಿಜೆಪಿಯವರಿಗಿಂತಲೂ ಕಾಂಗ್ರೆಸ್ನವರಿಗೆ ಖಚಿತವಾಗಿದೆ. ಸಿಎಂ ಬದಲಾವಣೆ ನಿಶ್ಚಿತವಾಗಿಬಿಟ್ಟಿದೆ. ಕೋರ್ಟ್ನಲ್ಲಿ ಇನ್ನೂ ವಿಚಾರಣೆ ನಡೆಯುತ್ತಲೇ ಇದೆ. ತೀರ್ಪಿಗೂ ಕಾಯದೇ ಸಿಎಂ ಸ್ಥಾನಕ್ಕೆ ಟವೆಲ್ ಹಾಕಿ ಕಾಂಗ್ರೆಸ್ನವರೇ ಕಾಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಈಗ ಸಿಎಂ ಆಗಲು ಕಾಂಗ್ರೆಸ್ನಲ್ಲಿ ಸೀನಿಯಾರಿಟಿ ಅಭಿಯಾನ ನಡೆಯುತ್ತಿದೆ. ದೇಶಪಾಂಡೆ ನಂತರ ಸತೀಶ್ ಜಾರಕಿಹೊಳಿ ಅಭಿಯಾನ ನಡೆಸುತ್ತಿದ್ದಾರೆ. ಎಂ.ಬಿ.ಪಾಟೀಲ್ ನಾನೇ ಸೀನಿಯರ್ ಅಂತಿದ್ದಾರೆ. ಪರಮೇಶ್ವರ್, ತಮಗೆ ಹಿಂದೆ ಅನ್ಯಾಯ ಆಗಿದೆ. ಅದನ್ನು ಸರಿಪಡಿಸಿ ಸಿಎಂ ಮಾಡಿ ಅಂತಿದ್ದಾರೆ. ಬೇರೆಯವರೆಲ್ಲ ಸಿಎಂ ಕುರ್ಚಿಗೆ ಟವೆಲ್ ಹಾಕ್ತಿದ್ರೆ ಡಿಕೆ ಶಿವಕುಮಾರ್ ಸ್ಟಿಕ್ಕರ್ ಅಂಟಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯನವರ ಪರ ಬಂಡೆಯಂತೆ ಇದ್ದೀವಿ ಅನ್ನೋರೇ ಸಿಎಂ ಆಗ್ತೀವಿ ಅಂತಿದ್ದಾರೆ. ಕಾಂಗ್ರೆಸ್ನಲ್ಲಿ ಸಿಎಂ ಬದಲಾವಣೆ ಬಗ್ಗೆ ದಿನದಿನಕ್ಕೆ ಮ್ಯೂಸಿಕಲ್ ಚೇರ್ ತರ ಫೈಟಿಂಗ್ ಜೋರಾಗಿದೆ. ಸಿಎಂ ಸಿದ್ದರಾಮಯ್ಯನವರು ಸಂಗೊಳ್ಳಿ ರಾಯಣ್ಣನ ಉದಾಹರಣೆ ಮೂಲಕ ಬೆನ್ನಿಗೆ ಚೂರಿ ಹಾಕಲಾಗುತ್ತಿದೆ ಎಂದು ಎರಡು ಸಲ ಹೇಳಿಕೆ ನೀಡಿದ್ದಾರೆ. ಅವರ ಪಕ್ಷದವರೇ ಅವರಿಗೆ ಮೋಸ ಮಾಡುತ್ತಿದ್ದಾರೆ. ಮುಡಾ ಪ್ರಕರಣದಲ್ಲಿ ನಾವ್ಯಾರೂ ಆರ್ಟಿಐ ಅರ್ಜಿ ಹಾಕಿಲ್ಲ. ಅವರ ಪಕ್ಷದವರೇ ಎಲ್ಲ ದಾಖಲೆಗಳನ್ನು ಹೊರಗೆ ತಂದಿದ್ದಾರೆ ಎಂದರು.