ದೆಹಲಿ, ಸೆ.9(DaijiworldNews/AA): ಕಳೆದ ಹತ್ತು ವರ್ಷಗಳಲ್ಲಿ ವಾಹನ ಉದ್ಯಮ ಕ್ಷೇತ್ರವು ಜಪಾನ್ ಅನ್ನೂ ಮೀರಿಸಿ 7ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಏರಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.
ಭಾರತೀಯ ವಾಹನ ಉದ್ಯಮ ತಯಾರಕರ ಸಂಘದ ವತಿಯಿಂದ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಹನ ಉದ್ಯಮ ಕ್ಷೇತ್ರದಲ್ಲಿ ಭಾರತ ಕ್ಷಿಪ್ರ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಅರೆವಾಹಕ ಕ್ಷೇತ್ರದಲ್ಲಿಯೂ ದಾಪುಗಾಲು ಇಡುತ್ತಿದೆ ಎಂದು ಹೇಳಿದರು.
ಭಾರತೀಯ ವಾಹನ ಉದ್ಯಮದ ಗಾತ್ರವು ಪ್ರಸ್ತುತ 22 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದು, ಈ ಪೈಕಿ ವಾಹನ ಘಟಕಗಳು 5.18 ಲಕ್ಷ ಕೋಟಿ ರೂಪಾಯಿಗಳ ಕೊಡುಗೆ ನೀಡುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಶೇಕಡಾ 9ರಷ್ಟು ಬೆಳವಣಿಗೆ ಕಂಡಿದೆ ಎಂದು ತಿಳಿಸಿದರು.
ವಾಹನ ಉದ್ಯಮದಲ್ಲಿ ಆಮದಿನ ಪ್ರಮಾಣ 1.68 ಲಕ್ಷ ಕೋಟಿ ರೂಪಾಯಿ ಇದ್ದು, ರಫ್ತು ವ್ಯವಹಾರ 1.76 ಲಕ್ಷ ಕೋಟಿಯಾಗಿದೆ. ಇದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಇದೇ ರೀತಿ ಮುಂದುವರೆದರೆ ಭಾರತವು ತನ್ನ ಮಾರುಕಟ್ಟೆಗಾಗಿ ಅರೆವಾಹಕ ಚಿಪ್ಗಳನ್ನು ತಯಾರಿಸಲು ಸಾಧ್ಯವಾಗುತ್ತದೆ ಎಂದರು.