ಬೆಳಗಾವಿ,ಮೇ 27(Daijiworld News/MSP): ಇಲ್ಲಿನ ಹಿರೇಬಾಗೇವಾಡಿ ಗ್ರಾಮದ ಎಪಿಎಂಸಿ ಆವರಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವಕನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಸಂಶಯಗಳೆದಿದ್ದು, ಆತನ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಟ್ವಿಟರ್ ನಲ್ಲಿ ಅಭಿಯಾನ ಪ್ರಾರಂಭವಾಗಿದೆ.
ಏನಿದು ಘಟನೆ
ಹಿರೇಬಾಗೇವಾಡಿ ಗ್ರಾಮದ ಎಪಿಎಂಸಿ ಆವರಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದ ಶಿವಕುಮಾರ್ ಬಲರಾಮಪ್ಪ ಉಪ್ಪಾರ (19) ಎನ್ನುವ ಯುವಕನ ಶವ ಭಾನುವಾರ ಪತ್ತೆಯಾಗಿತ್ತು. ಶಿವಕುಮಾರ್ ತನ್ನ ಮಾವ ಮಂಜುನಾಥ್ ಜತೆಗೆ ಗೋರಕ್ಷಕನಾಗಿ ಗುರುತಿಸಿಕೊಂಡಿದ್ದರು. ಗೋರಕ್ಷಕ ಎಂಬ ಕಾರಣಕ್ಕೆ ಶಿವಕುಮಾರನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎನ್ನುವ ಸುದ್ದಿ ಹಬ್ಬಿದ್ದು, ಆತನು ಆತ್ಮಹತ್ಯೆ ಬಗ್ಗೆ ಅನುಮಾನಗಳಿವೆ ಎಂದು ಹಿಂದೂ ಸಂಘಟನೆ ಸಂಶಯ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ ಆತನ ಸಾವಿಗೆ ಸೂಕ್ತ ನ್ಯಾಯ ದೊರಕಬೇಕು ಎಂದು ಟ್ವಿಟರ್ ನಲ್ಲಿ ಅಭಿಯಾನ ಪ್ರಾರಂಭವಾಗಿದೆ.
ಈ ಬಗ್ಗೆ ಸಂಸದೆ ಶೋಭಾ ಕರದ್ಲಾಂಜೆ ಟ್ವೀಟ್ ಮಾಡಿದ್ದು, ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಶಿವಕುಮಾರ್ ಸಾವಿನ ಕುರಿತು 'ಗೋರಕ್ಷಕ ಹತ್ಯೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿಸಿದ ಇಬ್ಬರನ್ನು ಬೆಳಗಾವಿ ಪೊಲೀಸರು ಭಾನುವಾರವೇ ಬಂಧಿಸಿದ್ದಾರೆ. ಶಿವಕುಮಾರ್ ಪೋಷಕರು ಆತನ ಸಾವಿನ ಕುರಿತು ಯಾವುದೇ ಸಂಶಯ ವ್ಯಕ್ತಪಡಿಸಲಿಲ್ಲ ಹಾಗೂ ಆತನ ಶವದ ಮೇಲೆ ಹಲ್ಲೆ ಮಾಡಿರುವ ಯಾವುದೇ ಕಲೆಗಳು ಇರಲಿಲ್ಲ. ಯುವಕನೇ ಆತ್ಮಹತ್ಯೆ ಮಾಡಿಕೊಂಡಿರುವಂತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.