ಬೆಂಗಳೂರು, ಸೆ.10(DaijiworldNews/AA): ವಾಲ್ಮೀಕಿ ನಿಗಮದ 21 ಕೋಟಿ ರೂ. ಮೊತ್ತವನ್ನು ಬಳ್ಳಾರಿ ಚುನಾವಣೆಗೆ ಖರ್ಚು ಮಾಡಿದ್ದಾಗಿ ಇಡಿ ತನ್ನ ದೋಷಾರೋಪ ಪಟ್ಟಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಹೀಗಾಗಿ ಬಳ್ಳಾರಿ ಸಂಸದರ ಸ್ಥಾನದಿಂದ ತುಕಾರಾಂ ಅವರನ್ನು ಚುನಾವಣಾ ಆಯೋಗವು ಕೂಡಲೇ ವಜಾಗೊಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಆಗ್ರಹ ಮಾಡಿದ್ದಾರೆ.
ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ವಾಲ್ಮೀಕಿ ನಿಗಮದ ಹಣ ಬಳಕೆ ಆಗಿರುವುದು ಸ್ಪಷ್ಟವಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ್ದು ಅಂತರರಾಜ್ಯ ಭ್ರಷ್ಟಾಚಾರದ ಹಗರಣ ಎಂದರು.
ವಾಲ್ಮೀಕಿ ನಿಗಮದ 187 ಕೋಟಿ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಅವರು ಪ್ರಮುಖ ಪಾತ್ರ ವಹಿಸಿರುವುದಾಗಿ ಇಡಿ ಚಾರ್ಜ್ ಶೀಟ್ ನಲ್ಲಿ ಹೇಳಿದೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇನ್ವೆಸ್ಟಿಗೇಶನ್ ಟೀಂ ನಾಗೇಂದ್ರರ ಹೆಸರನ್ನು ಉಲ್ಲೇಖಿಸಿಲ್ಲ. ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಎಸ್ಐಟಿ ಇಬ್ಬರು ಅಧಿಕಾರಿಗಳ ಹೆಸರನ್ನಷ್ಟೇ ಉಲ್ಲೇಖಿಸಿದೆ ಎಂದು ಕಿಡಿ ಕಾರಿದ್ದಾರೆ.
ಎಸ್ಐಟಿ ಮೂಲಕ ಮಾಜಿ ಸಚಿವರನ್ನು ಉಳಿಸುವ ಧೋರಣೆ ಈ ಸರ್ಕಾರದ್ದು. ಸರ್ಕಾರದ ಹಸ್ತಕ್ಷೇಪ, ಬೆಂಬಲ ಇಲ್ಲದೆ, ವಾಲ್ಮೀಕಿ ನಿಗಮದ ಹಗರಣ ನಡೆಯಲು ಸಾಧ್ಯವೇ ಇಲ್ಲ. ಮಹರ್ಷಿ ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಹಗರಣವನ್ನು ಮುಚ್ಚಿಹಾಕುವ ಕೆಲಸವನ್ನು ಎಸ್ಐಟಿ ಮಾಡುತ್ತಿರುವುದು ಸರಿಯಲ್ಲ. ಎಸ್ಐಟಿ ತನಿಖೆ, ಚಾರ್ಜ್ ಶೀಟ್ ಬಗ್ಗೆ ಜನರಿಗೆ ದೊಡ್ಡ ಶಂಕೆ, ಅನುಮಾನ ಇದೆ ಎಂದು ಹೇಳಿದ್ದಾರೆ.