ಬೆಂಗಳೂರು,ಸೆ.11 (DaijiworldNews/AK): ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಅಮೆರಿಕದಲ್ಲಿದ್ದು ಮೀಸಲಾತಿ ರದ್ದು ಮಾಡುವ ಹೇಳಿಕೆ ಕೊಟ್ಟಿದ್ದಾರೆ. ಅವರ ಹೇಳಿಕೆಯಿಂದ ದೇಶಾದ್ಯಂತ ವಿರೋಧ ಪಕ್ಷಗಳು, ದಲಿತ ಸಮುದಾಯಗಳು ಕುಪಿತಗೊಂಡಿವೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ಈಗ ರಾಹುಲ್ ಅವರ ಹೇಳಿಕೆಗೆ ಉತ್ತರ ಕೊಡಲಾಗದೆ ತೇಪೆ ಹಾಕುವ ಕೆಲಸ ಮಾಡುತ್ತಿದ್ದಾರೆ. ದೇಶದ ಪ್ರಥಮ ಪ್ರಧಾನಿ ನೆಹರೂ ಅವರು ಆ ಕಾಲದಲ್ಲೇ ಇದನ್ನು ಹೇಳಿದ್ದರು. ಮೀಸಲಾತಿ ಸರಿಯಾದ ಕ್ರಮ ಅಲ್ಲ; ಇದೊಂದು ಅನಿಷ್ಟ. ಇದರಿಂದ ದೇಶ ಉದ್ಧಾರವಾಗದು. ಇದರ ಬಗ್ಗೆ ನನಗೆ ಒಲವಿಲ್ಲ ಎಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು ಎಂದು ವಿವರಿಸಿದರು.
ಈ ಪತ್ರದ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಕೂಡ ಸದನದಲ್ಲಿ ಪ್ರಸ್ತಾಪ ಮಾಡಿ ಪತ್ರ ಪ್ರದರ್ಶನ ಮಾಡಿದ್ದರು ಎಂದರು.ಮೀಸಲಾತಿ ವಿಚಾರದಲ್ಲಿ ನೆಹರೂ ಅವರ ಮನೋಭಾವವನ್ನೇ ರಾಹುಲ್ ಅವರೂ ಪ್ರಸ್ತಾಪ ಮಾಡಿದ್ದಾರೆ. ಕಾಂಗ್ರೆಸ್ ದಲಿತ ವಿರೋಧಿ. ಕಾಂಗ್ರೆಸ್ಸಿಗರು ಹೇಳೋದೊಂದು ಮಾಡೋದೊಂದು. ಮೀಸಲಾತಿಗೆ ವಿರುದ್ಧವಾಗಿಯೇ ಇದ್ದಾರೆ. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಇವರು ಓಲೈಕೆ ಮಾಡಿ ಈ ರೀತಿ ಮಾಡುತ್ತಿದ್ದರು ಎಂದು ಟೀಕಿಸಿದರು.
ಕರ್ನಾಟಕದಲ್ಲಿ ದಲಿತರ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ. ದಲಿತರ ಹಣ ಲೂಟಿ ಮಾಡಿದ್ದು ದೊಡ್ಡ ಸುದ್ದಿಯಾಗಿ ಇವತ್ತು ಜನರ ಮಧ್ಯದಲ್ಲಿದೆ ಎಂದು ವಿಶ್ಲೇಷಿಸಿದರು. ಕಾಂಗ್ರೆಸ್ಸಿನ ದಲಿತ ವಿರೋಧಿ, ಮೀಸಲಾತಿ ವಿರೋಧಿ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ ಎಂದು ಜನರಲ್ಲಿ ಮನವಿ ಮಾಡಿದರು.
ರಾಹುಲ್ ಗಾಂಧಿಯವರಿಗೆ ಸರಿಯಾದ ಪಾಠ ಕಲಿಸಬೇಕಿದೆ. ಈ ಕಾಂಗ್ರೆಸ್ಸಿಗೂ ಬುದ್ಧಿ ಕಲಿಸಬೇಕಾಗಿದೆ ಎಂದ ಅವರು, ರಾಹುಲ್ ಗಾಂಧಿಯವರು ಮಾನಸಿಕ ಅಸ್ವಸ್ಥರಂತೆ ಭಾರತ ದೇಶದ ಮಾನಹಾನಿ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆಗಿಂದಾಗ್ಗೆ ಭಾರತ ದೇಶದ ಮಾನಹಾನಿ ಮಾಡುವುದನ್ನು ನಾವು ಗಮನಿಸುತ್ತಿದ್ದೇವೆ ಎಂದು ಹೇಳಿದರು.
ಈ ದೇಶದ ಮಣ್ಣಿನಿಂದ ಹೊರಗಡೆ ಹೋದ ತಕ್ಷಣ ಭಾರತವನ್ನು ಅಪಮಾನ ಮಾಡುತ್ತ ಇರುತ್ತಾರೆ. ಇವತ್ತೂ ಅದನ್ನು ಮುಂದುವರೆಸಿದ್ದಾರೆ. ನಾವು ಈ ದೇಶವನ್ನು ತಾಯಿಗೆ ಹೋಲಿಸಿ ಭಾರತ್ ಮಾತಾ ಕೀ ಜೈ ಎನ್ನುತ್ತೇವೆ. ಭಾರತಾಂಬೆಯ ಕುರಿತ ರಾಹುಲ್ ಅವರ ಹೇಳಿಕೆ ಪೀಡಕ ಎಂದರೆ, ಸ್ಯಾಡಿಸ್ಟ್ ಮನೋಭಾವದಿಂದ ಕೂಡಿದೆ ಎಂದು ಟೀಕಿಸಿದರು. ತಾಯಿಯನ್ನು ವಿವಸ್ತ್ರಗೊಳಿಸುವಂಥ ಮಾತು ಅವರದು ಎಂದು ಆಕ್ಷೇಪಿಸಿದರು. ಈ ಮಾತು ಹೇಳಲು ನೋವಾಗುತ್ತದೆ ಎಂದರು.