ಮೈಸೂರು, ಮೇ 27(Daijiworld News/SM): ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಜನತೆ ಬಹುಮತದಿಂದ ಆಯ್ಕೆ ಮಾಡಿದ್ದಾರೆ. ಗೋಹತ್ಯೆ ನಿಷೇಧ ಮತ್ತು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಇದೀಗ ನರೇಂದ್ರ ಮೋದಿ ಮುಂದಿರುವ ಸವಾಲಾಗಿದ್ದು, ಅವುಗಳನ್ನು ಪೂರೈಸಲು ಪ್ರಧಾನಿ ಶ್ರಮಿಸಬೇಕೆಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಎಂದರೆ ಹಿಂದೂಗಳ ಪಕ್ಷವೆಂದೇ ವಿರೋಧ ಪಕ್ಷದವರು ಆರೋಪಿಸುತ್ತಾ ಬಂದಿದ್ದಾರೆ. ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ದೇಶದ ಎಲ್ಲಾ ರಾಜ್ಯಗಳಲ್ಲಿರುವ ಪ್ರದೇಶಿಕ ಪಕ್ಷಗಳು ವಿವಿಧ ರೀತಿಯಲ್ಲಿ ಕಸರತ್ತುಗಳನ್ನು ನಡೆಸಿದ್ದವು. ಆದರೆ ಬಿಜೆಪಿಗೆ ಮತ್ತೊಮ್ಮೆ ಸರ್ಕಾರ ಮುನ್ನಡೆಸಲು ದೇಶದ ಎಲ್ಲಾ ಧರ್ಮೀಯರು ಬೆಂಬಲ ನೀಡಿದ್ದಾರೆ ಎಂದರು. ಸರ್ಕಾರ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಮತ್ತು ದೇಶದ ರಕ್ಷಣೆ ಮಾಡಲು ಸಿದ್ದರಿರಬೇಕೆಂದು ಅವರು ತಿಳಿಸಿದ್ದಾರೆ.
ದೇಶದಲ್ಲಿರುವ ಅನ್ಯಧರ್ಮಿಯರನ್ನು ಮನವೊಲಿಸಿ ಗೋಹತ್ಯೆ ನಿಷೇಧ ಹಾಗೂ ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಮಾಡುವಂತಹ ಮಹತ್ವದ ಕಾರ್ಯವನ್ನು ಮಾಡುವ ಅಗತ್ಯವಿದೆ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.