ನವದೆಹಲಿ,ಮೇ 28 (Daijiworld News/MSP): ಲೋಕಸಭೆ ಚುನಾವಣೆಯಲ್ಲಿ ಸೋಲಿನ ಅಪಘಾತದ ಬಳಿಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ತಾವು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ತೀರ್ಮಾನಿಸಿದ್ದಾರೆ. ಹೀಗಾಗಿ ಸೋಲಿನ ಅಘಾತದ ನಡುವೆ ರಾಹುಲ್ ಈ ನಿರ್ಧಾರ ಪಕ್ಷವನ್ನು ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿಸಿದೆ. ವಿವಿಧ ರಾಜ್ಯ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೋಲಿನ ಹೊಣೆ ಹೊತ್ತು ಸಲ್ಲಿಸಿರುವ ರಾಜೀನಾಮೆ ಪತ್ರಗಳು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕೈ ಸೇರುತ್ತಿವೆ. ಇನ್ನೊಂದೆಡೆ ಪಕ್ಷದ ಮುಖಂಡರನ್ನು ಭೇಟಿಯಾಗಲು ರಾಹುಲ್ ನಿರಾಕರಿಸಿದ್ದಾರೆ.
ಆದಷ್ಟು ಶೀಘ್ರ ಅಧ್ಯಕ್ಷ ಪದವಿಗೆ ಸೂಕ್ತ ವ್ಯಕ್ತಿಯನ್ನು ಹುಡುಕಿ ಎಂದು ರಾಹುಲ್ ಸೂಚಿಸಿದ್ದಾರೆ. ಆದರೆ ಅವರ ರಾಜೀನಾಮೆ ನಿರ್ಧಾರವನ್ನು ಪಕ್ಷದ ಹಿರಿಯ ನಾಯಕರು ಇನ್ನು ಅನುಮೋದಿಸಿಲ್ಲ. ಮಾತ್ರವಲ್ಲದೆ ಸೋಲಿಗೆ ಒಬ್ಬನನ್ನೇ ಹೊಣೆಗಾರಿಕೆ ಮಾಡುವುದು ತಪ್ಪೆಂದಿದ್ದಾರೆ. ಆದರೆ ತಾನು ಯಾವುದೇ ಕಾರಣಕ್ಕೂ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುವುದಿಲ್ಲ ಎಂದು ಹೇಳಿದ್ದಲ್ಲದೆ ಪಕ್ಷದ ಪುನರುಜ್ಜೀವನಕ್ಕಾಗಿ ಗಾಂಧಿ-ನೆಹರು ಕುಟುಂಬ ಹೊರತುಪಡಿಸಿ ಒಬ್ಬ ಸಮರ್ಥ ನಾಯಕತ್ವವನ್ನು ಹುಡುಕಬೇಕೆಂದು ಒತ್ತಾಯಿಸಿದ್ದಾರೆ.
ಈ ಮಧ್ಯೆ ರಾಹುಲ್ ಅವರ ನಿರ್ಧಾರವನ್ನು ಬದಲಿಸಲು ತಾಯಿ ಸೋನಿಯಾ ಮತ್ತು ಸೋದರಿ ಪ್ರಿಯಾಂಕಾ ಗಾಂಧಿ ಪ್ರಯತ್ನಿಸುತ್ತಿದ್ದು, ಕೆಲವು ದಿನ ವಿಶ್ರಾಂತಿ ಪಡೆಯಲು ವಿದೇಶ ಪ್ರವಾಸ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.