ಬೆಂಗಳೂರು,ಮೇ 28 (Daijiworld News/MSP): ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ, ದಕ್ಷ ಅಧಿಕಾರಿ ಕೆ. ಅಣ್ಣಾಮಲೈ IPS ಗೆ ರಾಜೀನಾಮೆ ಬಹುತೇಕ ಖಚಿತವಾಗಿದೆ. ಅವರು ಮಂಗಳವಾರವೇ ತಮ್ಮ ಹುದ್ದೆಗೆ ಡಿಜಿ ಅಂಡ್ ಐಜಿಪಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಡಿಜಿಪಿ ಮೂಲಕ ರಾಜ್ಯ ಗೃಹ ಕಾರ್ಯದರ್ಶಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿಕೊಡಲಾಗಿದೆ. ಆದಾದ ಬಳಿಕ ಗೃಹ ಕಾರ್ಯದರ್ಶಿಗಳು ನೇರವಾಗಿ ಕೇಂದ್ರ ಯುಪಿಎಸ್ಸಿಗೆ ರಾಜೀನಾಮೆ ಪತ್ರ ರವಾನಿಸಲಿದ್ದಾರೆ.
ಇತ್ತೀಚಿನ ಕೆಲ ಘಟನೆಗಳಿಂದ ನೊಂದುಕೊಂಡಿರುವ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದರೂ ಕೂಡಾ ಅಣ್ಣಾಮಲೈ ರಾಜೀನಾಮೆಗೆ ತಂದೆ- ತಾಯಿ, ವೈಯಕ್ತಿಕ ಜೀವನದ ಕಾರಣ ಕೊಟ್ಟಿದ್ದಾರೆ.
ನನ್ನ ವೈಯಕ್ತಿಕ ಜೀವನಕ್ಕೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ, ನಾನು ಈ ಸ್ಥಾನದಲ್ಲಿರಲು ಬಹಳ ಜನ ಕಾರಣರಾಗಿದ್ದಾರೆ ಅವರು ನನ್ನನ್ನು ಅಗಲಿದ ಸಮಯದಲ್ಲಿ ಅಂತ್ಯಕ್ರಿಯೆಗೂ ಹೋಗಲು ಸಾಧ್ಯವಾಗಿಲ್ಲ . ನನ್ನ ತಂದೆ ತಾಯಿ ಮಗನೊಂದಿಗೆ ಕಾಲ ಕಳೆಯಬೇಕು ನನ್ನ ವೈಯಕ್ತಿಕ ಜೀವನದೆಡೆ ಗಮನ ಕೊಡಬೇಕು ಎಂದು ಈ ನಿರ್ಧಾರ ತಳೆದಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.