ತುಮಕೂರು, ಸೆ.15(DaijiworldNews/AA): ರಾಜ್ಯದಲ್ಲಿ ಯಾವುದೇ ಗಲಭೆಗಳಾದರೂ ಘಟನೆಗಳಾದರೂ ಎಸ್ಪಿ, ಐಜಿಪಿಗಳೇ ಹೊಣೆಗಾರರು ಎಂದು ಗೃಹ ಸಚಿವ ಡಾ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ನಾಗಮಂಗಲ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಮಾತನಾಡಿದ ಅವರು, ಈ ಕುರಿತ ಪೊಲೀಸ್ ತನಿಖಾ ವರದಿ ಬಂದ ಮೇಲೆ ಯಾರದ್ದು ತಪ್ಪು, ಯಾರು ಪ್ರಚೋದನೆ ನೀಡಿದವರು ಎನ್ನುವುದು ತಿಳಿಯಲಿದೆ. ರಾಜ್ಯದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರಲು ಯಾರಾದ್ರೂ ಪ್ರಯತ್ನಿಸಿದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ಪ್ರಕರಣದ ಬಗ್ಗೆ ಪ್ರತಿಕ್ರಿಯಿದ ಅವರು, ಮುನಿರತ್ನ ಅವರ ಧ್ವನಿಯನ್ನು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಪರೀಕ್ಷೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು. ಜೊತೆಗೆ ನಾಳಿನ ಈದ್ ಮಿಲಾದ್ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.