ನವದೆಹಲಿ, ಸೆ.15(DaijiworldNews/AA): ರಾಹುಲ್ ಗಾಂಧಿ ಭಾರತದ ನಂಬರ್ 1 ಭಯೋತ್ಪಾದಕ. ಆತ ಭಾರತೀಯನಲ್ಲ ಎಂದು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಅಮೆರಿಕಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಿಖ್ಖರ ಕುರಿತು ನೀಡಿದ್ದ ಹೇಳಿಕೆ ಟೀಕಿಸುವ ಭರದಲ್ಲಿ ರವನೀತ್ ಅವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ರಾಹುಲ್ ಗಾಂಧಿ ದೇಶದ ಬಹುದೊಡ್ಡ ಶತ್ರು. ಅವರನ್ನು ಹಿಡಿದುಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಹೇಳಿದ್ದಾರೆ.
ಮೊದಲು ರಾಹುಲ್ ಗಾಂಧಿ ಅವರು ಮುಸ್ಲಿಮರನ್ನು ಬಳಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಈಗ ಅವರು ಸಿಖ್ಖರನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ರಾಹುಲ್ ಗಾಂಧಿಗೂ ಮೊದಲು ದೇಶದ ಮೋಸ್ಟ್ ವಾಂಟೆಡ್ ವ್ಯಕ್ತಿಗಳು ಈ ಹಿಂದೆ ಇಂತಹ ಹೇಳಿಕೆಗಳನ್ನು ನೀಡಿದ್ದರು. ಭಯೋತ್ಪಾದಕರು ಕೂಡ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಶ್ಲಾಘಿಸಿದ್ದಾರೆ. ಅಂತಹ ಜನರು ರಾಹುಲ್ ಗಾಂಧಿಯನ್ನು ಬೆಂಬಲಿಸುವುದಾದರೆ, ಇವರು ಕೂಡ ದೇಶದ ನಂ.1 ಭಯೋತ್ಪಾದಕರಾಗಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ರಾಹುಲ್ ಗಾಂಧಿ ಅವರು ಭಾರತದ ಹೊರಗೆ ಹೆಚ್ಚಿನ ಸಮಯ ಕಳೆದಿದ್ದರಿಂದ ಅವರು ಭಾರತೀಯನಲ್ಲ. ನನ್ನ ಅಭಿಪ್ರಾಯದಲ್ಲಿ ರಾಹುಲ್ ಗಾಂಧಿ ಭಾರತೀಯನಲ್ಲ. ಅವರು ತಮ್ಮ ಹೆಚ್ಚಿನ ಸಮಯವನ್ನು ದೇಶದ ಹೊರಗೆ ಕಳೆದಿದ್ದಾರೆ. ಅವರ ಸ್ನೇಹಿತರು ಮತ್ತು ಕುಟುಂಬದವರು ಅಲ್ಲಿಯೇ ಇದ್ದಾರೆ. ಅದಕ್ಕಾಗಿಯೇ ಅವರು ಎಲ್ಲೋ ಹೋಗುವುದರಿಂದ ತಮ್ಮ ದೇಶವನ್ನು ಹೆಚ್ಚು ಪ್ರೀತಿಸುವುದಿಲ್ಲ. ವಿದೇಶದಲ್ಲಿ ಭಾರತದ ಬಗ್ಗೆ ನಕಾರಾತ್ಮಕವಾಗಿ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.