ನವದೆಹಲಿ, ಸೆ.16(DaijiworldNews/AK):ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ 48 ಗಂಟೆಗಳ ಒಳಗಾಗಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಇನ್ನೂ 24 ಗಂಟೆ ಬಾಕಿ ಉಳಿದಿದೆ. ಈ ನಡುವೆ ದೆಹಲಿಯ ಸಿಎಂ ಗದ್ದುಗೆಗೆ ಪೈಪೋಟಿ ಶುರುವಾಗಿದೆ.
ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ 6 ತಿಂಗಳು ಜೈಲಿನಲ್ಲಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇದೇ ಸೆಪ್ಟೆಂಬರ್ 13ರಂದು ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಂಡರು.
ಆ ಬಳಿಕ ಮೊದಲ ಭಾಷಣ ಮಾಡಿದ ಕೇಜ್ರಿವಾಲ್ ರಾಜೀನಾಮೆ ಘೋಷಿಸಿದರು. ಅಲ್ಲದೇ ಜನತೆ ತೀರ್ಪು ನೀಡುವವರೆಗೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಈ ನಡುವೆ ಇದೀಗ ಆಮ್ ಆದ್ಮಿ ಪಕ್ಷದಲ್ಲಿ ಇರುವ ದಿಗ್ಗಜ ನಾಯಕರ ನಡುವೆ ಪೈಪೋಟಿ ಶುರುವಾಗಿದೆ.
ಸದ್ಯ ಸಿಎಂ ರೇಸ್ನಲ್ಲಿ ಸಚಿವೆ ಅತಿಶಿ ಮೂರು ಬಾರಿ ಶಾಸಕರಾಗಿರುವ ಸೌರಭ್ ಭಾರದ್ವಾಜ್, ರಾಘವ್ ಛಡ್ಡಾ, ಕೈಲಾಶ್ ಗೆಹ್ಲೋಟ್ ಹಾಗೂ ಸಂಜಯ್ ಸಿಂಗ್ ಅವರ ಹೆಸರು ಕೇಳಿಬಂದಿದೆ. ಸಚಿವ ಸಂಪುಟ ಸಭೆಯ ಬಳಿಕ ದೆಹಲಿಗೆ ನೂತನ ಸಿಎಂ ಹೆಸರು ಘೋಷಣೆ ಮಾಡಲಾಗುತ್ತದೆ ಎಂದು ವರದಿಗಳು ಉಲ್ಲೇಖಿಸಿವೆ.