ಬೆಳಗಾವಿ, ಸೆ.16(DaijiworldNews/AA): ಜನಸಾಮಾನ್ಯರಿಗೆ ಹೆಚ್ಚು ಅನುಕೂಲ ಒದಗಿಸುವ ನಿಟ್ಟಿನಲ್ಲಿ ಸುಗಮ ಸುರಕ್ಷಿತ ರೈಲು ಸೇವೆ ನೀಡಲಾಗುತ್ತಿದೆ. ರೈಲು ಸೇವೆಯಲ್ಲಿ ಈ ಹಿಂದಿಗಿಂತ ನೂರು ಪಟ್ಟು ಅಭಿವೃದ್ಧಿ ಸಾಧಿಸಲಾಗಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ಯೋಜನೆಗಳ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ. ಇಂದು ದೇಶದ ವಿವಿಧೆಡೆ 7 ನೂತನ ರೈಲು ಸಂಚಾರಕ್ಕೆ ಪ್ರಧಾನಿ ಅವರು ಹಸಿರು ನಿಶಾನೆ ತೋರಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ತೆರಳುತ್ತಿದ್ದು, ಸಂಜೆ 4 ಗಂಟೆಗೆ ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ ನೀಡಲಾಗುವುದು ಎಂದರು.
ಇಂದು ಪುಣೆಯಿಂದ ಹುಬ್ಬಳ್ಳಿಗೆ ವಂದೇ ಭಾರತ್ ರೈಲು ಸಂಚಾರ ಆರಂಭಗೊಳ್ಳಲಿದ್ದು, ಈ ರೈಲಿಗೆ ಇಂದು ರಾತ್ರಿ 8 ಗಂಟೆಗೆ ಬೆಳಗಾವಿಯಲ್ಲಿ ಚಾಲನೆ ನೀಡಲಾಗುವುದು. ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈಲು ಸಂಪರ್ಕ ಕಲ್ಪಿಸುವ ಬಗ್ಗೆ ಪರಿಗಣಿಸಲಾಗಿದೆ. ಯೋಜನೆಯ ಅನುಷ್ಠಾನಕ್ಕೆ ಸರ್ವೇ ಕಾರ್ಯ ನಡೆದಿದೆ ಎಂದು ತಿಳಿಸಿದರು.