ಬೆಂಗಳೂರು, ಮೇ 28 (Daijiworld News/MSP): ದಕ್ಷ ಅಧಿಕಾರಿಯಾಗಿ ಎಲ್ಲರ ಮನಗೆದ್ದಿರುವ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಮಂಗಳವಾರ ತಮ್ಮ ಐಪಿಎಸ್ ಹುದ್ದೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ರಾಜೀನಾಮೆ ಬಗ್ಗೆ ಸ್ಪಷ್ಟನೆ ನೀಡಿದ ಅಣ್ಣಮಲೈ ಭಾವನಾತ್ಮಕ ಪತ್ರ ಬರೆದು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಅದರಲ್ಲಿ ಪ್ರಮುಖವಾಗಿ, " ಕಳೆದ ವರ್ಷ ನಾನು ಮಾನಸ ಸರೋವರದ ಕೈಲಾಸ ಯಾತ್ರೆಯಲ್ಲಿ ಭಾಗವಹಿಸಿದ್ದೆ. ಆ ಯಾತ್ರೆ ನನ್ನ ಕಣ್ಣು ತೆರೆಸಿತು. ನನ್ನ ಮುಂದಿನ ಜೀವನದ ಬಗ್ಗೆ ಮಾರ್ಗದರ್ಶನ ಸಿಕ್ಕಿತು. ಇದಲ್ಲದೆ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿಯವರ ಸಾವು ನನ್ನನ್ನ ತೀವ್ರವಾಗಿ ಕಾಡಿತು. ಅಲ್ಲದೆ ಬದುಕಿನ ಮತ್ತೊಂದು ಆಯಾಮಕ್ಕೆ ಹೊರಳಲು, ನನ್ನ ಬದುಕನ್ನ ನಾನೇ ಓದಿಕೊಳ್ಳಲು ವೇದಿಕೆ ಸೃಷ್ಟಿಸಿತು " ಎಂದಿದ್ದಾರೆ.
ಇನ್ನು ಅಣ್ಣಮಲೈ ರಾಜಕೀಯ ಕಾಲಿಡುವ ಬಗ್ಗೆ ನಿರಾಕರಿಸಿದರೂ, ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. “ನಾನು ಅಣ್ಣಾಮಲೈ ಅವರೊಂದಿಗೆ ಮಾತನಾಡಿದ್ದೇನೆ. ಇವತ್ತು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಅವರು ರಾಜಕೀಯಕ್ಕೆ ಹೋಗಲು ತಯಾರಾಗಿದ್ದಾರೆ. ಐಪಿಎಸ್ ಅಧಿಕಾರಿಯಾಗಲೂ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಅದೇ ರೀತಿ ಕೆಲಸಕ್ಕೆ ರಾಜೀನಾಮೆ ನೀಡಲು ತುಂಬಾ ಧೈರ್ಯ ಬೇಕು. ಇಂತಹ ಸಾಧಕರು ರಾಜಕೀಯಕ್ಕೆ ಹೋಗುವುದನ್ನು ನೋಡಲು ಚೆನ್ನಾಗಿರುತ್ತದೆ” ಬರೆದು ಅವರ ಮುಂದಿನ ಬದುಕಿಗೆ ಶುಭ ಕೋರಿದ್ದಾರೆ.