ನವದೆಹಲಿ, ಮೇ 28 (Daijiworld News/MSP): ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಹೀನಾಯವಾಗಿ ಸೋತಿದ್ದು ಅಗತ್ಯ ಸಂಖ್ಯಾಬಲವಿಲ್ಲದ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆಯಲ್ಲಿ ಅಧಿಕೃತ ಪ್ರತಿಪಕ್ಷ ಸ್ಥಾನವೂ ಲಭ್ಯವಾಗದಂತಾಗಿದೆ. ಇನ್ನೊಂದೆಡೆ ತಮ್ಮ ರಾಜೀನಾಮೆ ನಿರ್ಧಾರಕ್ಕೆ ಬಿಗಿಪಟ್ಟು ಹಿಡಿದಿರುವ ರಾಹುಲ್ ಗಾಂಧಿ, ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ಪಕ್ಷದ ನಾಯಕರಿಗೆ ಸೂಚಿಸಿರುವುದು ಪಕ್ಷವನ್ನು ಬಿಕ್ಕಟ್ಟಿನಲ್ಲಿ ಸಿಲುಕುವಂತೆ ಮಾಡಿದೆ.
ಪಕ್ಷದ ಪುನರುಜ್ಜೀವನಕ್ಕಾಗಿ ಗಾಂಧಿ-ನೆಹರು ಕುಟುಂಬ ಹೊರತುಪಡಿಸಿ ಒಬ್ಬ ಸಮರ್ಥ ನಾಯಕತ್ವವನ್ನು ಹುಡುಕಬೇಕೆಂದು ಒತ್ತಾಯಿಸುತ್ತಿರುವ ರಾಹುಲ್ ಅವರ ನಿರ್ಧಾರವನ್ನು ಬದಲಿಸುವಂತೆ ತಾಯಿ ಸೋನಿಯಾ ಗಾಂಧಿ, ಆಪ್ತ ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್,ರಣದೀಪ್ ಸುರ್ಜೆವಾಲ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಒತ್ತಾಯಿಸುತ್ತಿದ್ದಾರೆ.
ಯಾರ ಒತ್ತಡಕ್ಕೂ ಮಣಿಯದ ರಾಹುಲ್ ಪಕ್ಷದ ಪುನರುಜ್ಜೀವನಕ್ಕಾಗಿ ಈ ನಿರ್ಧಾರ ಎನ್ನುತ್ತಿದ್ದಾರೆ. ಮಾತ್ರವಲ್ಲ ಕಾಂಗ್ರೆಸ್ ಹಾಗೂ ರಾಹುಲ್ ಆಪ್ತ ಬಳಗದಲ್ಲಿರುವ ಸಚಿನ್ ಪೈಲಟ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ ರಾಹುಲ್ ಸಚಿನ್ ಪೈಲೆಟ್ ಕಡೆ ಒಲವು ಹೊಂದಿದ್ದು ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ ನೀಡುವ ಕುರಿತಂತೆ ಆಂತರಿಕ ವಲಯದಲ್ಲಿ ಮಾತುಕತೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.