ಬೆಂಗಳೂರು, ಮೇ28(Daijiworld News/SS): ಕೆಲ ದಿನಗಳ ಹಿಂದೆ ಬೆಳಗಾವಿಯ ಬಾಗೇವಾಡಿಯಲ್ಲಿ ಹಸು ಕಳ್ಳಸಾಗಾಣಿಕೆದಾರರು ಶಿವು ಉಪ್ಪಾರ್ ಎಂಬ ಯುವಕನನ್ನು ಹತ್ಯೆ ಮಾಡಿದ್ದಾರೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟಿಸಿದ್ದರು.
ಆದರೆ ಶಿವು ಉಪ್ಪಾರ್ದ್ದು ಕೊಲೆ ಅಲ್ಲ ಆತ್ಮಹತ್ಯೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿತ್ತು. ತಪ್ಪಾದ ಮಾಹಿತಿಯನ್ನು ಶೋಭಾ ಟ್ವೀಟ್ ಮಾಡಿದ್ದರ ಬಗ್ಗೆ ಫ್ಯಾಕ್ಟ್ಚೆಕ್ ನಡೆದ ನಂತರ ಇದೀಗ ಹೊಸತೊಂದು ಟ್ವೀಟ್ ಮೂಲಕ ಶೋಭಾ, ಶಿವು ಉಪ್ಪಾರ್ದ್ದು ಆತ್ಮಹತ್ಯೆ ಎಂಬ ಸತ್ಯವನ್ನು ಒಪ್ಪಿಕೊಂಡಿದ್ದಾರೆ.
ಬೆಳಗಾವಿಯ ಬಾಗೇವಾಡಿ ಬಸ್ ನಿಲ್ದಾಣದ ಸಮೀಪ ನೇಣು ಬಿಗಿದ ಸ್ಥಿತಿಯಲ್ಲಿ ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದ ಶಿವಕುಮಾರ ಬಲರಾಮ ಉಪ್ಪಾರ (19) ಎನ್ನುವ ಯುವಕನ ಶವ ಪತ್ತೆಯಾಗಿತ್ತು. ಶಿವಕುಮಾರ್ ತನ್ನ ಮಾವನ ಜತೆಗೆ ಗೋರಕ್ಷಕನಾಗಿ ಗುರುತಿಸಿಕೊಂಡಿದ್ದರು. ಈ ಕಾರಣಕ್ಕೆ ಶಿವಕುಮಾರನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ಎಲ್ಲೆಡೆ ಸುದ್ದಿ ಹಬ್ಬಿಸಲಾಗಿತ್ತು. ಕೆಲವೇ ಕ್ಷಣಗಳಲ್ಲಿ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಪ್ರಕರಣ ಸಂಬಂಧ ಚಿಕ್ಕಮಗಳೂರಿನಿಂದ ಸಂಸದೆಯಾಗಿ ಆಯ್ಕೆಯಾಗಿರುವ ಶೋಭಾ ಕರಂದ್ಲಾಜೆ ಘಟನೆಯ ಬಗ್ಗೆ ಪರಿಶೀಲಿಸದೆ ಭಾನುವಾರ ಸಂಜೆ ಟ್ವೀಟ್ ಮಾಡಿದ್ದರು. ಗೋವುಗಳನ್ನು ರಕ್ಷಣೆ ಮಾಡುತ್ತಿದ್ದ ಯುವಕನನ್ನು ಹತ್ಯೆ ಮಾಡಿದ್ದಾರೆ. ಸಿಎಂ ಕುಮಾರಸ್ವಾಮಿ ಸೂಕ್ತ ಕ್ರಮ ಕೈಗೊಂಡು ಅಪರಾಧಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದರು.
ಇದೀಗ ಹೊಸತೊಂದು ಟ್ವೀಟ್ ಮೂಲಕ ಶೋಭಾ, ಶಿವು ಉಪ್ಪಾರ್ದ್ದು ಆತ್ಮಹತ್ಯೆ ಎಂಬ ಸತ್ಯವನ್ನು ಒಪ್ಪಿಕೊಂಡಿದ್ದಾರೆ.