ಬೆಂಗಳೂರು, ಮೇ28(Daijiworld News/SS): ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಏಕಾಏಕಿ ಅವರು ಈ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಎಲ್ಲರು ಅಚ್ಚರಿಗೊಂಡಿದ್ದಾರೆ. ಈ ಮಧ್ಯೆ ಅವರು ಈ ನಿರ್ಧಾರ ಕೈಗೊಂಡಿದ್ದೇಕೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಈಗ ಸ್ವತಃ ಅಣ್ಣಾಮಲೈ ಇದಕ್ಕೆ ಪತ್ರದ ಮೂಲಕ ಉತ್ತರ ನೀಡಿದ್ದಾರೆ.
ಅಣ್ಣಾಮಲೈ ಬರೆದ ಪತ್ರದಲ್ಲಿ ಏನಿದೆ ಗೊತ್ತಾ..?
ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ನನ್ನ ರಾಜೀನಾಮೆ ಬಗ್ಗೆ ಮಾತನಾಡಲು ಇಷ್ಟಪಡುತ್ತೇನೆ. ಇಂದು ಅಂದರೆ ಮೇ 28ರಂದು ನಾನು ರಾಜೀನಾಮೆ ನೀಡಿದ್ದೇನೆ. ರಾಜೀನಾಮೆಯ ಪ್ರಕ್ರಿಯೆ ಅಧಿಕೃತವಾಗಿ ಪೂರ್ಣಗೊಳಲೂ ಸ್ವಲ್ಪ ಸಮಯ ಬೇಕಾಗುತ್ತದೆ. ನನ್ನ ಸುತ್ತ ಹರಿದಾಡುವ ಮಾತುಗಳ ಬಗ್ಗೆ ನಾನು ಸ್ಪಷ್ಟನೆ ನೀಡುತ್ತೇನೆ. ನಾನು 6 ತಿಂಗಳಿನಿಂದ ಯೋಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ನಾನು ಕಳೆದ 9 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೇನೆ. ನಾನು ನನ್ನ ಖಾಕಿಯಲ್ಲಿ ಪ್ರತಿ ಕ್ಷಣವನ್ನು ಜೀವಿಸಿದ್ದೇನೆ.
ನನ್ನ ಸಹದ್ಯೋಗಿಗಳ ಜೊತೆ ಕಳೆದ ಸುಂದರವಾದ ಕ್ಷಣಗಳು ಖಾಕಿ ನನಗೆ ಎಂದಿಗೂ ಮರೆಯಲು ಬಿಡುವುದಿಲ್ಲ. ಪೊಲೀಸ್ ಅಧಿಕಾರಿಯ ಕೆಲಸ ದೇವರಿಗೆ ಹತ್ತಿರವಾದ ಕೆಲಸ ಎಂದು ನಾನು ನಂಬಿದ್ದೇನೆ. ಹೆಚ್ಚು ಒತ್ತಡ ಇರುವ ಕೆಲಸಗಳು ತನ್ನದೇ ಆದ ಕಡಿಮೆ ಸಮಯದಲ್ಲಿ ಬರುತ್ತದೆ. ನಾನು ಸಾಕಷ್ಟು ಕಾರ್ಯಕ್ರಮಗಳನ್ನು ಮಿಸ್ ಮಾಡಿಕೊಂಡಿದ್ದೇನೆ. ನಾನು ಕಷ್ಟದಲ್ಲಿದ್ದಾಗ ನನಗೆ ಜನರು ಸಹಾಯ ಮಾಡಿದ್ದರು. ಆದರೆ ಅವರಿಗೆ ಕಷ್ಟದ ಸಮಯ ಬಂದಾಗ ನನಗೆ ಅವರ ಜೊತೆ ಇರಲು ಸಾಧ್ಯವಾಗಲಿಲ್ಲ.
ಹಿಂದೊಮ್ಮೆ ನಾನು ಕೈಲಾಸ ಮಾನಸ ಸರೋವರಕ್ಕೆ ಭೇಟಿ ನೀಡಿದ್ದಾಗ ನನ್ನ ಜೀವನದಲ್ಲಿ ನನ್ನ ಆದ್ಯತೆಗಳನ್ನು ಉತ್ತಮಗೊಳಿಸಲು ಸಹಾಯ ಮಾಡಿತ್ತು. ಮಧುಕರ್ ಶೆಟ್ಟಿ ಸರ್ ಸಾವು ನನಗೆ ನನ್ನ ಜೀವನದ ಬಗ್ಗೆ ಯೋಚಿಸಲು ಸಹಾಯ ಮಾಡಿತ್ತು. ಎಲ್ಲ ಒಳ್ಳೆಯ ಕ್ಷಣಗಳು ಮುಗಿಯುತ್ತಾ ಬಂದಿದೆ. ಖಾಕಿ ಸಮಯ ಇಲ್ಲಿಗೆ ಕೊನೆ ಆಗುತ್ತದೆ ಎಂದು ನಿರ್ಧರಿಸಿದ್ದೇನೆ. ಲೋಕಸಭಾ ಚುನಾವಣೆ ನಂತರ ರಾಜೀನಾಮೆ ನೀಡಲು ನಿರ್ಧರಿಸಿದೆ. ಚುನಾವಣೆ ಸಮಯದಲ್ಲಿ ನನ್ನ ರಾಜೀನಾಮೆಯಿಂದ ಸರ್ಕಾರಕ್ಕೆ ಅನಾನುಕೂಲವಾಗಬಾರದು ಎನ್ನುವ ಕಾರಣಕ್ಕೆ ಈಗ ರಾಜೀನಾಮೆ ನೀಡಿದ್ದೇನೆ. ನನ್ನ ರಾಜೀನಾಮೆಯಿಂದ ಯಾರಿಗಾದರೂ ನೋವಾದರೆ ಕ್ಷಮೆ ಕೇಳುತ್ತೇನೆ. ಇದು ನನಗೆ ಹಾಗೂ ನನ್ನ ಬೆಸ್ಟ್ ಫ್ರೆಂಡ್ ಅಂದರೆ ನನ್ನ ಪತ್ನಿಗೆ ಭಾವನಾತ್ಮಕವಾದ ಸಮಯ.
ಬದುಕಿನ ಎಲ್ಲಾ ಮಜಲುಗಳಿಗೂ ಒಂದು ಕೊನೆ ಇದ್ದೇ ಇದೆ. ನನ್ನ ಖಾಕಿ ಬದುಕಿನ ಕೆಲಸ ಮುಗಿದಿದೆ. ಹಾಗಂತ ನಾನು ನಿರ್ಧರಿಸಿದ್ದೇನೆ. ನಾನು ಲೋಕಸಭಾ ಚುನಾವಣೆಗೆ ಮೊದಲೇ ಈ ಬಗ್ಗೆ ನಿರ್ಧರಿಸಿದ್ದೆ. ಆದರೆ ಚುನಾವಣಾ ಸಮಯದಲ್ಲಿ ರಾಜೀನಾಮೆ ಕೊಟ್ಟು ಕರ್ತವ್ಯದಿಂದ ಹಿಂದೆ ಸರಿಯಲು ಮನಸ್ಸು ಒಪ್ಪಲಿಲ್ಲ. ನನ್ನ ವೃತ್ತಿ ಜೀವನದಲ್ಲಿ ಯಾರಿಗಾದ್ರೂ ಯಾವುದಾದ್ರೂ ತೊಂದರೆ ಅಥವಾ ಮನಃಸ್ತಾಪಗಳಿದ್ದರೆ ಅಂಥವರ ಬಳಿ ಕ್ಷಮೆ ಕೇಳುತ್ತೇನೆ.
ಸದ್ಯಕ್ಕೆ ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನಾನು ನನ್ನ ಜೀವನದಲ್ಲಿ ಕಳೆದುಕೊಂಡ ಪುಟ್ಟ ಪುಟ್ಟ ಕ್ಷಣಗಳನ್ನು ಎಂಜಾಯ್ ಮಾಡುತ್ತೇನೆ. ನನ್ನ ಮಗ ಈಗ ಬೇಗ ಬೆಳೆಯುತ್ತಿದ್ದಾನೆ. ನಾನು ಈಗ ಅವನಿಗೆ ಒಳ್ಳೆಯ ತಂದೆ ಆಗಬೇಕು. ಅವನು ಬೆಳೆಯುವ ಪ್ರತಿ ಕ್ಷಣ ಅವನಿಗೆ ನನ್ನ ಸಮಯ ಬೇಕು. ನಾನು ನನ್ನ ಮನೆಗೆ ಹಿಂತಿರುಗಿ ಕೃಷಿ ಕೆಲಸ ಮಾಡುತ್ತೇನೆ. ಅಲ್ಲದೆ ನನ್ನ ಕುರಿಗಳು ನನ್ನ ಮಾತುಗಳನ್ನು ಕೇಳುತ್ತದೆಯೋ ಎಂಬುದನ್ನು ನೋಡುತ್ತೇನೆ. ಏಕೆಂದರೆ ನಾನು ಈಗ ಪೊಲೀಸ್ ಅಧಿಕಾರಿ ಅಲ್ಲ.
ಕಾರ್ಕಳ, ಉಡುಪಿ, ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ನನ್ನ ಜೊತೆ ನ್ಯಾಯಕ್ಕಾಗಿ ಹೋರಾಡಿದ ಪ್ರತಿಯೊಬ್ಬ ಅದ್ಭುತ ವ್ಯಕ್ತಿಯನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ಹಿರಿಯ ಅಧಿಕಾರಿಗಳು ಕಲಿಸಿ ಕೊಟ್ಟ ಮಾರ್ಗದರ್ಶನ ಹಾಗೂ ನನಗಿಂತ ಸ್ಮಾರ್ಟ್ ಆದ ಜೂನಿಯರ್ ಅಧಿಕಾರಿಗಳನ್ನು ಮಿಸ್ ಮಾಡಿಕೊಳ್ಳುತ್ತೇನೆ. ನಾನು ನನ್ನ ಪೇದೆಗಳನ್ನು ಸಹ ಮಿಸ್ ಮಾಡಿಕೊಳ್ಳುತ್ತೇನೆ. ನಾನು ಅವರಿಗಾಗಿ ಜೀವಿಸಿದ್ದೇನೆ ಹಾಗೂ ಅವರಿಗೆ ಅರ್ಹತೆ ಇರುವ ಉತ್ತಮ ಜೀವನವನ್ನು ನೀಡಲು ಪ್ರಯತ್ನಿಸಿದ್ದೇನೆ.
ನಾನು ಘನತೆಯಿಂದ ಹಾಗೂ ಹೆಮ್ಮೆಯಿಂದ ನನ್ನ ಸೇವೆಯನ್ನು ಸಲ್ಲಿಸಿದ್ದೇನೆ ಎಂದುಕೊಳ್ಳುತ್ತೇನೆ. ಯಾವುದೇ ಸಮಯದಲ್ಲಿ ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಒಂದು ಮಾತು ಸತ್ಯ ನಾನು ನಿಮ್ಮನ್ನು ಹಾಗೂ ಮುಖ್ಯವಾಗಿ ನಿಮ್ಮ ಪ್ರೀತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಅಣ್ಣಮಲೈ ಪತ್ರದಲ್ಲಿ ಬರೆದಿದ್ದಾರೆ.