ನವದೆಹಲಿ, ಮೇ28(Daijiworld News/SS): ಕುವೈತ್ನಲ್ಲಿ ತೊಂದರೆಯಲ್ಲಿ ಸಿಲುಕಿರುವ ಮಂಗಳೂರಿನ 35 ಯುವಕರು ಸುರಕ್ಷಿತವಾಗಿ ತಾಯ್ನಡಿಗೆ ಕಳುಹಿಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭರವಸೆ ನೀಡಿದ್ದಾರೆ.
ಸಂಕಷ್ಟದಲ್ಲಿರುವ ಯುವಕರ ಬಗ್ಗೆ ಈಗಾಗಲೇ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಸಚಿವಾಲಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ. ಪರಿಸ್ಥಿತಿ ನಿಭಾಯಿಸುವ ಜವಾಬ್ದಾರಿಯನ್ನು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅವರಿಗೆ ವಹಿಸಲಾಗಿದೆ. ಸಂಸದ ನಳಿನ್ ಅವರು ಸುಷ್ಮಾ ಸ್ವರಾಜ್ ಅವರಿಗೂ ಸಮಸ್ಯೆ ಕುರಿತು ವಿವರಣೆ ನೀಡಿದ್ದು, ಅಗತ್ಯ ನೆರವು ಒದಗಿಸುವ ಬಗ್ಗೆ ಅವರಿಂದ ಭರವಸೆ ದೊರೆತಿದೆ.
ಕುವೈತ್ನಲ್ಲಿ ಸಂಕಷ್ಟದಲ್ಲಿದ್ದ ಮಂಗಳೂರಿನ ಯುವಕರು ಸಹಾಯ ಕೋರಿ ಕೆಲ ದಿನಗಳ ಹಿಂದೆ ವಿಡಿಯೋ ಕಾಲ್ ಮಾಡಿದ್ದರು. ಕೂಡಲೇ ಎಚ್ಚೆತ್ತುಕೊಂಡಿದ್ದ ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಈ ಬಗ್ಗೆ ಕಾರ್ಯಪ್ರವೃತ್ತರಾಗಿದ್ದರು. ಮಾತ್ರವಲ್ಲ, ಶಾಸಕರು ಶೀಘ್ರ ಯುವಕರನ್ನು ಊರಿಗೆ ಮರಳಿಸುವ ಕುರಿತು ಭರವಸೆ ನೀಡಿದ್ದಾರೆ.
ಇದೀಗ ಸ್ವದೇಶ ಹಾಗೂ ಅನಿವಾಸಿ ಕನ್ನಡಿಗರಿಂದ ಚಾಚಿದ ಸಹಾಯ ಹಸ್ತ ಸಂತ್ರಸ್ತರಲ್ಲಿ ಸಮಾಧಾನ ತಂದಿದೆ.