ಚಿತ್ರದುರ್ಗ, ಮೇ28(Daijiworld News/SS): ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸುವುದರಿಂದ ರಾಷ್ಟ್ರೀಯ ಸ್ಫೂರ್ತಿ ಮೂಡುತ್ತದೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಗೋನೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ರಾಜರಾಜೇಶ್ವರಿ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವದಲ್ಲಿ, ಕಲ್ಲು, ಶಿಲೆಯಷ್ಟೇ ದೇವರಲ್ಲ ಎಂಬುದನ್ನು ಭಕ್ತರಿಗೆ ಮನವರಿಕೆ ಮಾಡಿಕೊಡಲು ಮುಂದಾದ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ರಾಷ್ಟ್ರಧ್ವಜ ಒಂದು ಅರಿವೆ ತುಂಡು ಎಂಬ ನಿದರ್ಶನ ನೀಡಿದರು.
ರಾಷ್ಟ್ರಧ್ವಜಕ್ಕೆ ನಾವೆಲ್ಲರೂ ವಂದನೆ ಸಲ್ಲಿಸುತ್ತೇವೆ. ಅದೊಂದು ಅರಿವೆ (ಬಟ್ಟೆ) ತುಂಡು. ಅಂತಹ ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸುವುದರಿಂದ ರಾಷ್ಟ್ರೀಯ ಸ್ಫೂರ್ತಿ ಮೂಡುತ್ತದೆ ಎಂದು ಹೇಳಿದರು.
ಶಿಲೆಯಲ್ಲಿ ಅರಳುವ ಮೂರ್ತಿಯಲ್ಲಿ ವಿಶ್ವವ್ಯಾಪಿಯಾದ ಭಗವಂತನ ದರ್ಶನ ಪಡೆಯಲು ದೇಗುಲದ ಅಗತ್ಯವಿದೆ. ದೇಗುಲಗಳಿಂದ ಸ್ಫೂರ್ತಿ, ಜಾಗೃತಿ ಉಂಟಾಗುತ್ತದೆ. ವಿದೇಶಿಗರು ಹಿಂದೂ ಧರ್ಮದ ಮೇಲೆ ನಡೆಸಿದ ದಾಳಿಯನ್ನು ಸಹಿಸಿಕೊಳ್ಳುವ ಶಕ್ತಿ ಸಿಕ್ಕಿದ್ದು ಇಂತಹ ದೇಗುಲಗಳಿಂದ ಎಂದು ಅಭಿಪ್ರಾಯಪಟ್ಟರು.