ಬೆಂಗಳೂರು, ಮೇ28(Daijiworld News/SS): ಸರಕಾರ ಉಳಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಯಡಿಯೂರಪ್ಪ ಏನೇನು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಲಿ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ವಿಚಾರದಲ್ಲಿ ಈಗೇನೂ ಹೇಳುವುದಿಲ್ಲ. ಗಾಂಧೀಜಿ ಹೇಳಿದಂತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಕಿವಿಗೆ ಹತ್ತಿ ಹಾಕಿಕೊಂಡು, ಬಾಯಿಗೆ ಬೀಗ ಹಾಕಿಕೊಂಡಂತೆ ನಾನು ಇದ್ದೇನೆ. ಸರಕಾರ ಉಳಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಯಡಿಯೂರಪ್ಪ ಏನೇನು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಲಿ ಎಂದು ಸವಾಲ್ ಹಾಕಿದರು.
ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ ಸೇರಿ ಹಿರಿಯರ ಸೋಲು ದಿಗ್ಭ್ರಮೆ ತಂದಿದೆ. ರಾಜ್ಯದಲ್ಲಿ ನಮ್ಮ ನಿರೀಕ್ಷೆಗೆ ವಿರುದ್ಧವಾದ ಫಲಿತಾಂಶ ಬಂದಿದೆ. ಗೌಡರು, ಖರ್ಗೆ, ಮೊಯ್ಲಿ ಅವರಂತಹ ಹಿರಿಯರ ಸೋಲು ನಿಜಕ್ಕೂ ಶಾಕ್ ತಂದಿದೆ. ಕಾಂಗ್ರೆಸ್ನಿಂದ ಒಬ್ಬರು ಸಂಸದರಷ್ಟೇ ಲೋಕಸಭೆಗೆ ಹೋಗಿದ್ದಾರೆಂದರೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಎಲ್ಲಿ ಏನು ತಪ್ಪಾಗಿದೆಯೆಂದು ಹೇಳುವುದೂ ಕಷ್ಟವಾಗುತ್ತಿದೆ. ಸಹೋದರ ಡಿ.ಕೆ.ಸುರೇಶ್ ಆಯ್ಕೆಯಾಗಿದ್ದರೂ ಹಿರಿಯರ ಸೋಲಿನ ನಡುವೆ ಈ ಗೆಲುವಿನಿಂದ ಖುಷಿಯಾಗುತ್ತಿಲ್ಲ. ಅವರೊಬ್ಬರೇ ಸಂಸತ್ತಿನಲ್ಲಿದ್ದರೆ ಏನು ಪ್ರಯೋಜನ....? ನಮ್ಮ ಮತ್ತು ಜೆಡಿಎಸ್ ಕಾರ್ಯಕರ್ತರೆಲ್ಲ ಸೇರಿ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.