ಹೊಸದಿಲ್ಲಿ,ಮೇ29(Daijiworld News/AZM): ಮುಂಬೈಯ ಬಿವೈಎಲ್ ನಾಯರ್ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಪಾಯಲ್ ತಡ್ವಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ವೈದ್ಯೆಯರನ್ನು ಬಂಧಿಸಿದ್ದಾರೆ.
ಬಂಧಿತ ವೈದ್ಯೆಯರನ್ನು ಅಂಕಿತ ಕಾಂಡೆವಾಲ್,ಹೇಮ ಅಹುಜಾ,ಹಾಗೂ ಭಕ್ತಿ ಮೆಹೆರ್ ಎಂದು ಗುರುತಿಸಲಾಗಿದೆ.
ಕಳೆದ ಬುಧವಾರದಂದು ಪಾಯಲ್ ಆತ್ಮಹತ್ಯೆ ಮಾಡಿದ ಬಳಿಕ ಆರೋಪಿ ವೈದ್ಯೆ ಭಕ್ತಿ ಮೆಹೆರ್ ತಲೆಮರೆಸಿಕೊಂಡಿದ್ದರು. ರ್ಯಾಗಿಂಗ್ ಹಾಗೂ ಜಾತಿ ನಿಂದನೆಯ ಮೂಲಕ ಮೂವರು ಮಹಿಳಾ ವೈದ್ಯರು ಪಾಯಲ್ ಗೆ ಕಿರುಕುಳ ನೀಡಿದ ಹಿನ್ನಲೆ ಮನನೊಂದು ಅವರು ಆತ್ಯಹತ್ಯೆ ಮಾಡಿದ್ದಾರೆ ಎಂದು ತಾಯಿ ಅಬಿದಾ ಆರೋಪಿಸಿದ್ದರು.
ಪಾಯಲ್ ಅವರನ್ನು ಜಾತಿ ನಿಂದನೆ ಮತ್ತು ರ್ಯಾಗಿಂಗ್ ಮಾಡುವ ಮೂಲಕ ಆಕೆಯ ಸಾವಿಗೆ ಕಾರಣರಾಗಿರುವ ಮೂವರು ಮಹಿಳಾ ವೈದ್ಯೆಯರ ವಿರುದ್ಧ ಅತ್ಯಂತ ಕಠಿಣ ಕ್ರಮ ಜರುಗಿಸುವಂತೆ ತಡ್ವಿಯವರ ಪತಿ ಸಲ್ಮಾನ್ ಮತ್ತು ತಾಯಿ ಅಬಿದಾ ಸಲೀಂ ಆಗ್ರಹಿಸಿದ್ದಾರೆ.