ಬೆಂಗಳೂರು,ಮೇ29(Daijiworld News/AZM):ಇಂದು ದಿವಂಗತ,ನಟ,ಮಾಜಿ ಸಚಿವ ಅಂಬರೀಶ್ ರವರ 67ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನಲೆ ಅಂಬರೀಶ್ ಅವರು ಇಲ್ಲದ ಈ ಬಾರಿಯ ಹುಟ್ಟುಹಬ್ಬವನ್ನು ಮಂಡ್ಯದ ಜನತೆ ಸ್ವಾಭಿಮಾನಿ ವಿಜಯೋತ್ಸವವಾಗಿ ಆಚರಿಸುತ್ತಿದ್ದಾರೆ. ಹಾಗೂ ಪ್ರತೀ ವರ್ಷ ಮೇ.29ರಂದು ಸ್ವಾಭಿಮಾನಿ ವಿಜಯೋತ್ಸವವೆಂದೇ ಆಚರಿಸಲಾಗುವುದೆಂದು ಅಂಬರೀಶ್ ಪತ್ನಿ,ನೂತನ ಸಂಸದೆ ಸುಮಲತಾರವರು ಘೋಷಿಸಿದ್ದಾರೆ.
ತಮ್ಮ ಗತ್ತು ಗೈರತ್ತಿನಿಂದಲೇ ಹೆಸರಾಗಿದ್ದ ಹಾಗೂ ಆ ಮೂಲಕವೇ ರೆಬಲ್ ಸ್ಟಾರ್ ಎಂದು ಅಂಬರೀಶ್ ಅವರು ಖ್ಯಾತಿ ಪಡೆದಿದ್ದರು . ಪ್ರತಿ ವರ್ಷ ಅಂಬರೀಶ್ ಹುಟ್ಟುಹಬ್ಬ ಎಂದರೆ ಅವರ ಮನೆಯ ಮುಂದೆ ಅಭಿಮಾನಿಗಳ ದೊಡ್ಡ ದಂಡೆ ನೆರೆದಿರುತ್ತಿತ್ತು. ಎಲ್ಲರೂ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದರು. ಆದರೆ, ಅವರಿಂದು ನಮ್ಮ ಜೊತೆ ಇಲ್ಲ. ಅದೇ ನೋವಿನಲ್ಲಿ ಅಭಿಮಾನಿಗಳು ಅವರ ಸಮಾಧಿಯತ್ತ ತೆರಳಿ ತಮ್ಮ ನೆಚ್ಚಿನ ನಟನಿಗೆ ಶುಭಕೋರುತ್ತಿದ್ದಾರೆ.
ಅಂಬರೀಶ್ ಪತ್ನಿ,ನೂತನ ಸಂಸದೆ, ನಟಿ ಸುಮಲತಾರವರು ಕೂಡಾ ಅಂಬರೀಶ್ ಅವರ ಸಮಾಧಿ ಬಳಿ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಮಂಡ್ಯ ಖ್ಯಾತ ನಟ ಅಂಬರೀಶ್ ಅವರ ತವರು ಜಿಲ್ಲೆ. ನಟನಾಗಿ ಶಾಸಕನಾಗಿ ಸಂಸದನಾಗಿ ಹಾಗೂ ಸಚಿವನಾಗಿ ಹೀಗೆ ಎಲ್ಲಾ ರಂಗದಲ್ಲೂ ಅಂಬರೀಶ್ ಅವರನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸಿದ ಜಿಲ್ಲೆ. ಇದೇ ಜಿಲ್ಲೆಯಲ್ಲಿ ನಡೆದ 2019ರ ಲೋಕಸಭಾ ಚುನಾವನೆಯನ್ನು ಸ್ವಾಭಿಮಾನಿ ಚುನಾವಣೆ ಎಂದೇ ಬಣ್ಣಿಸಲಾಗಿತ್ತು.
ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಟಿ ಸುಮಲತಾ ವಿರುದ್ಧ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಸ್ಪರ್ಧಿಸಿದ್ದರು. ಈ ಜಿದ್ದಾಜಿದ್ದಿ ಹೋರಾಟದಲ್ಲಿ ಕೊನೆಗೂ ಸುಮಲತಾ ಅವರಿಗೆ ಗೆಲುವಾಗಿತ್ತು. ಚುನಾವಣಾ ಫಲಿತಾಂಶದ ಮರು ದಿನವೇ ಅಂಬಿ ಸಮಾಧಿಯ ಮುಂದೆ ಘೋಷಣೆ ನೀಡಿದ ಸುಮಲತಾ ಮೇ.29ರ ಅಂಬರೀಶ್ ಅವರ ಹುಟ್ಟುಹಬ್ಬವನ್ನು ಮಂಡ್ಯದಲ್ಲಿ ಅವರ ಅಭಿಮಾನಿಗಳ ಸಮ್ಮುಖದಲ್ಲಿ ಸ್ವಾಭಿಮಾನಿ ವಿಜಯೋತ್ಸವದ ದಿನವಾಗಿ ಆಚರಿಸಲಾಗುವುದು ಎಂದು ಘೋಷಿಸಿದ್ದರು.