ಒರಿಸ್ಸಾ, ಮೇ 29(Daijiworld News/MSP): ಬಾಲಾಸೋರ ಲೋಕಸಭೆ ಕ್ಷೇತ್ರ, ಒರಿಸ್ಸಾ ರಾಜ್ಯದ ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲಿ ಒಂದು. ಬಾಲಾಸೋರ ಕ್ಷೇತ್ರದದಲ್ಲಿ ಸಂಸದರಾಗಿದ್ದ ಬಿಜು ಜನತಾ ದಳ ಪಕ್ಷದ ರವೀಂದ್ರ ಕುಮಾರ ಜೆನಾ ಅವರನ್ನು ಸೋಲಿಸಿ 12,956 ಮತಗಳ ಅಂತರದಿಂದ ಗೆದ್ದ ಭಾರತೀಯ ಜನತಾ ಪಾರ್ಟಿಯಿಂದ ಸಂಸದ ಪ್ರತಾಪ ಚಂದ್ರ ಸಾರಂಗಿ ಆ ಕ್ಷೇತ್ರದ ಮತದಾರ ಮನಸ್ಸು ಕದ್ದು ಕೋಟ್ಯಾಧೀಶರಾಗಿದ್ದಾರೆ.
ಇವರು ಒರಿಸ್ಸಾದಲ್ಲಿ ‘ಒರಿಸ್ಸಾದ ನರೇಂದ್ರ ಮೋದಿ’ ಎಂದೇ ಖ್ಯಾತರಾಗಿದ್ದಾರೆ. ಕೋಟ್ಯಾಧೀಶ, ಹಾಲಿ ಸಂಸದರಾಗಿದ್ದ ರವೀಂದ್ರ ಕುಮಾರ ಜೆನಾ ಅವರನ್ನು ಸೋಲಿಸಿದ ಪ್ರತಾಪ ಚಂದ್ರ ಸಾರಂಗಿ ಆಸ್ತಿಯ ವಿವರ ಕೇಳಿದರೆ ನಿಜಕ್ಕೂ ಎಲ್ಲರೂ ಅಚ್ಚರಿಗೀಡಾಗುತ್ತಾರೆ ಯಾಕೆಂದರೆ ಅವರ ಆಸ್ತಿ ಒಂದು ಪುಟ್ಟದ ಗುಡಿಸಲು ರೀತಿಯ ಮನೆ , ಸೈಕಲ್ ಹಾಗೂ ಒಂದು ಬ್ಯಾಗ್ .. ಇದೇ ಇವರ ಒಟ್ಟಾರೆ ಆಸ್ತಿ
ಚುನಾವಣಾ ಪ್ರಚಾರವೆಂದರೆ ಇವರ ಪಾಲಿಗೆ ಬೃಹತ್ ಸಮಾವೇಶ, ಸಾಲು ಸಾಲು ವಾಹನಗಳಲ್ಲ ಬದಲಾಗಿ ತಮ್ಮ ಚುನಾವಣಾ ಪ್ರಚಾರ ಕಾರ್ಯಕ್ಕೆ ಸೈಕಲ್ ಸಾಲುವುದಿಲ್ಲ ಎಂದು ಆಟೊ ರಿಕ್ಷಾವೊಂದನ್ನು ಅವಲಂಭಿಸಿ ಪ್ರಚಾರಕ್ಕೇ ಸೀಮಿತಗೊಳಿಸಿದ್ದರು. ಇಂತಹ ವ್ಯಕ್ತಿತ್ವದ ತಾಪ ಸಿಂಗ್ ಸಾರಂಗಿ ಒಡಿಶಾದ ಬಾಲಸೋರ್ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದಾರೆ. 64 ವರ್ಷದ ಇವರು ಬಾಲಸೋರ್ ಜಿಲ್ಲೆಯ ಗೋಪಿನಾಥಪುರ್ನ ಬಡಕುಟುಂಬದಲ್ಲಿ ಜನಿಸಿದ್ದರು.ಅಲ್ಲೇ ಸ್ಥಳೀಯ ಫಕೀರ್ ಮೋಹನ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು. ಬಾಲ್ಯದಿಂದಲೂ ಅಧ್ಯಾತ್ಮದತ್ತ ಸೆಳೆತಕ್ಕೆ ಒಳಗಾಗಿ ಅವಿವಾಹಿತರಾಗಿಯೇ ಅವರು ತಮ್ಮ ತಾಯಿಯೊಂದಿಗೆ ವಾಸವಾಗಿದ್ದರು. ಕಳೆದ ವರ್ಷವಷ್ಟೇ ತಾಯಿ ನಿಧನರಾಗಿದ್ದಾರೆ.
ಬಿಜೆಪಿ, ಆರ್ಎಸ್ಎಸ್ ಪರ ಸಕ್ರಿಯವಾಗಿ ಕೆಲಸ ಮಾಡುತ್ತಾ ಮಯೂರ್ಭಂಜ್ ಜಿಲ್ಲೆಯಲ್ಲಿ ಬುಡಕಟ್ಟು ಜನರಿಗೆ ಸಮರ್ ಕರ ಕೇಂದ್ರ ಹೆಸರಿನಲ್ಲಿ ಶಾಲೆಗಳನ್ನು ತೆರೆದಿದ್ದಾರೆ. ಅಲ್ಲದೆ ಮದ್ಯನಿಷೇದ, ಭ್ರಷ್ಟಾಚಾರ, ಅನ್ಯಾಯ, ಪೊಲೀಸ್ ದೌರ್ಜನ್ಯ ಪ್ರಕರಣ ವಿರುದ್ಧದ ಹಲವು ಹೋರಾಟಗಳ ನೇತೃತ್ವ ವಹಿಸಿದ್ದಾರೆ. ಕಳೆದ ಬಾರಿ ಲೋಕಸಭೆಗೆ ಸ್ಪರ್ಧಿಸಿ ಸೋತ ಇವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರೊಬ್ಬರು ಇವರ ಫೋಟೊ ಇವರ "ಸರಳ ಜೀವನ "ವನ್ನು ಫೋಸ್ಟ್ ಮಾಡಿದ್ದರು. ಈ ಪೋಸ್ಟ್ ಅವರ ನೈಜ್ಯ ವ್ಯಕ್ತಿತ್ವವನ್ನು ಎಲ್ಲರಿಗೂ ಪರಿಚಯಿಸುವಂತೆ ಮಾಡಿತು.