ನವದೆಹಲಿ,ಮೇ29(Daijiworld News/AZM): ನಾಳೆ(ಮೇ.30) ಸಂಜೆ 7 ಗಂಟೆಗೆ ರಾಷ್ಟ್ರಪತಿ ಭವನ ಮುಂಭಾಗ ಭಾರತದ ಪ್ರಧಾನಮಂತ್ರಿಯಾಗಿ ಎರಡನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಬಾರಿ ದರ್ಬಾರ್ ಹಾಲ್ ಬದಲು ಫೋರ್ಕೋರ್ಟ್ನಲ್ಲಿ ಸಮಾರಂಭ ನಡೆಯಲಿದ್ದು,ಈ ಕಾರ್ಯಕ್ರಮಕ್ಕೆ ಸುಮಾರು 6,500 ಮಂದಿ ಗಣ್ಯ ಅತಿಥಿಗಳು ಹಾಜರಾಗುವ ಸಾಧ್ಯತೆ ಇದೆ.
ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ, ರಾಷ್ಟ್ರಪತಿ ಭವನದ ಮುಂಭಾಗ ವೇದಿಕೆ ಸಿದ್ಧವಾಗಿದೆ. ಕಳೆದ ಬಾರಿ 5 ಸಾವಿರ ಅತಿಥಿಗಳಿಗೆ ಅವಕಾಶ ನೀಡಲಾಗಿತ್ತು. ಈ ಬಾರಿ 6,500 ಅತಿಥಿಗಳೂ ಭಾಗವಹಿಸಲು ಅವಕಾಶ ನೀಡಲಾಗಿದೆ.
ಈ ಪ್ರತಿಜ್ಞಾವಿಧಿ ಕಾರ್ಯಕ್ರಮಕ್ಕೆ 8 ದೇಶಗಳು ಸಾಕ್ಷಿಯಾಗಲಿವೆ. ಬಾಂಗ್ಲಾದೇಶ, ಶ್ರೀಲಂಕಾ, ಮಯನ್ಮಾರ್, ಝೆಕ್ ರಿಪಬ್ಲಿಕ್ ದೇಶದ ಅಧ್ಯಕ್ಷರು, ಮಾರಿಷಸ್, ನೇಪಾಳ, ಭೂತಾನ್, ಥೈಲ್ಯಾಂಡ್ ಪ್ರಧಾನಮಂತ್ರಿಗಳು ಹಾಗೂ ಶಾಂಘೈ ಕೋ ಆಪರೇಷನ್ ರಾಷ್ಟ್ರಗಳ ಸದಸ್ಯರು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ಧಾರೆ.
ನಾಳೆ ಪ್ರಮಾಣವಚನ ಸ್ವೀಕರಿಸುವ ಮುನ್ನ ಬೆಳಿಗ್ಗೆ 7 ಗಂಟೆಗೆ ನರೇಂದ್ರ ಮೋದಿ ಅಟಲ್ ಬಿಹಾರಿ ವಾಜಪೇಯಿ ಸಮಾಧಿಗೆ ನಮನ ಸಲ್ಲಿಸಲಿದ್ದಾರೆ.