ಪಶ್ಚಿಮ ಬಂಗಾಳ, ಮೇ 29(Daijiworld News/MSP): ಮೇ 30 ರಂದು ನಡೆಯಲಿರುವ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆದಿದ್ದು, ಕಾರ್ಯಕ್ರಮಕ್ಕೆ ವಿಶ್ವದ ಗಣ್ಯಾತಿ ಗಣ್ಯರು ಭಾಗವಹಿಸುವ ಹಿನ್ನಲೆಯಲ್ಲಿ ರಾಷ್ಟ್ರಪತಿ ಭವನ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಆದರೆ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಲು ಸಿದ್ದವಾಗಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೊನೇ ಕ್ಷಣದಲ್ಲಿ ಮನಸ್ಸು ಬದಲಾಯಿಸಿ , ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದು ಸಮಾರಂಭದಲ್ಲಿ ನಾನು ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಬುಧವಾರ ಪತ್ರ ಬರೆದು ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ನರೇಂದ್ರ ಮೋದಿಯವರೇ ನೀವು ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಕ್ಕೆ ಅಭಿನಂದನೆಗಳು. ನಾನು ನೀವು ನೀಡಿದ ಸಾಂವಿಧಾನಿಕ ಆಮಂತ್ರಣವನ್ನುಸ್ವೀಕರಿಸಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದುಕೊಂಡಿದ್ದೆ. ಆದರೆ ಕಳೆದ ಒಂದು ತಾಸಿನಿಂದ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ವರದಿ ನನ್ನನ್ನು ವಿಚಲಿತಳನ್ನಾಗಿಸಿದೆ. ಪಶ್ಚಿಮ ಬಂಗಾಳದಲ್ಲಿ 54 ರಾಜಕೀಯ ಹತ್ಯೆಗಳು ನಡೆದಿವೆ ಎಂದು ಬಿಜೆಪಿ ಆರೋಪಿಸುತ್ತಿದೆ. ಇದೊಂದು ತಪ್ಪು ಸುದ್ದಿಯಾಗಿದ್ದು ಬಂಗಾಳದಲ್ಲಿ ಯಾವುದೇ ರಾಜಕೀಯ ಹತ್ಯೆಗಳು ನಡೆದಿಲ್ಲ.
ಕೌಟುಂಬಿಕ ಹಾಗೂ ವ್ಯಯಕ್ತಿಕ ಕಾರಣಗಳಿಗಾಗಿ ನಡೆದ ಹತ್ಯೆಗಳಿಗೆ ರಾಜಕೀಯ ಬಣ್ಣ ಕೊಡಲಾಗುತ್ತಿದೆ. ನಿಮ್ಮ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದಿದ್ದಾರೆ.
ನರೇಂದ್ರ ಮೋದಿ ಅವರೇ ಈ ಎಲ್ಲಾ ವಿಚಾರಗಳು ನನ್ನನ್ನು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ನನ್ನನ್ನು ತಡೆದಿವೆ. ಕ್ಷಮಿಸಿ ಎಂದು ಬರೆದಿದ್ದಾರೆ.
ಮಾತ್ರವಲ್ಲದೆ ಪ್ರಧಾನಿ ಪ್ರಮಾಣ ವಚನ ಸ್ವೀಕಾರದಂತಹ ಸಮಾರಂಭಗಳು ಪ್ರಜಾಪ್ರಭುತ್ವದ ಉತ್ಸವವಾಗಬೇಕೇ ಹೊರತು ಯಾವ ಪಕ್ಷವೂ ಅದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು ಎಂದು ತಮ್ಮ ಟ್ವೀಟ್ ನಲ್ಲಿ ಕಿಡಿಕಾರಿದ್ದಾರೆ.