ಸಿರೋಂಜ್ , ಮೇ 29(Daijiworld News/MSP): ವಿವಾಹ ಮಾಡಿಸಿದ್ದ ಪುರೋಹಿತನ ಜೊತೆಯೇ ಎರಡು ವಾರದ ಹಿಂದೆ ವಿವಾಹವಾಗಿದ್ದ ನವ ವಿವಾಹಿತೆ ಪರಾರಿಯಾಗಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಸಿರೋಂಜ್ ನಲ್ಲಿ ನಡೆದಿದೆ.
ರಡು ವಾರಗಳ ಹಿಂದೆ ಅಂದರೇ ಮೇ 7 ರಂದು ಪರಾರಿಯಾಗಿರುವ ರೀನಾ ಬಾಯಿ (21) ಎಂಬ ವಧುವಿಗೆ ವಿನೋದ್ ಮಹಾರಾಜ್ ಎನ್ನುವ ಪುರೋಹಿತ ಮದುವೆ ಮಾಡಿಸಿದ್ದ. ಆದರೆ ಮೇ 23 ರಂದು ಆಕೆ ಪುರೋಹಿತನ ಜೊತೆಯೇ ಓಡಿ ಹೋಗಿದ್ದಾಳೆ.
ವಿವಾಹದ ನಂತರದ ಶಾಸ್ತ್ರಗಳನ್ನು ನಡೆಸುವ ಸಲುವಾಗಿ ತವರು ಮನೆಗೆ ಆಗಮಿಸಿದ್ದ ನವ ವಿವಾಹಿತೆ ಕೂಡ ಮೇ 23 ರಿಂದ ನಾಪತ್ತೆಯಾಗಿದ್ದಾಳೆ. ಅತ್ತ ಕಡೇ ಮೇ 23 ರಂದು ಪುರೋಹಿತ ಮತ್ತೊಂದು ಮದುವೆ ಮಾಡಿಸಿದ್ದ. ಅದಾದ ನಂತರ ಅವರಿಬ್ಬರ ಬಗ್ಗೆ ಸುಳಿವಿಲ್ಲ, ಎಲ್ಲಿದ್ದಾರೆ ಎಂಬ ಬಗ್ಗೆಯೂ ಮಾಹಿತಿಯಿಲ್ಲ.
ಪುರೋಹಿತನಿಗೆ ಈಗಾಗಲೇ ಮದುವೆಯಾಗಿ, ಇಬ್ಬರು ಮಕ್ಕಳಿದ್ದಾರೆ. ಈಗ ಪರಾರಿ ಆಗಿರುವ ಮಹಿಳೆ ಜತೆಗೆ ಎರಡು ವರ್ಷದ ಸಂಬಂಧ ಇತ್ತು ಎಂದು ತಿಳಿದುಬಂದಿದೆ. ಪುರೋಹಿತ ಅಷ್ಟೇ ಅಲ್ಲ, ಆತನ ಇಡೀ ಕುಟುಂಬವೇ ನಾಪತ್ತೆಯಾಗಿದೆ.
ಒಂದೂವರೆ ಲಕ್ಷ ರು ಮೌಲ್ಯದ ಚಿನ್ನಾಭರಣ ಮತ್ತು 30 ಸಾವಿರ ರು ಹಣದ ಜೊತೆ ವಧು ಪರಾರಿಯಾಗಿದ್ದಾಳೆ.ಈ ಸಂಬಂಧ ವಧುವಿನ ಮನೆಯವರು ದೂರು ದಾಖಲಿಸಿದ್ದಾರೆ.