ಬೆಂಗಳೂರು, ಮೇ29(Daijiworld News/SS): ನನಗೆ ಜನತೆ ಮುಖ್ಯ, ಜನರು ಏನೆಲ್ಲಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಅದನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡುವೆ ಎಂದು ನೂತನ ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.
ಅಂಬರೀಷ್ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಮಂಡ್ಯ ಜನತೆ ನನಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅಂಬರೀಷ್ ಅವರನ್ನ ಸ್ಫೂರ್ತಿಯಾಗಿ ತೆಗೆದು ಕೊಳ್ಳುತ್ತೇನೆ. ಇಷ್ಟು ದಿನ ಕೆಲಸ ಮಾಡಿದವರ ಮಾತುಗಳನ್ನು ಜನತೆ ಕೇಳಿದ್ದಾರೆ. ಯಾರ ಮಾತುಗಳಿಂದಲೂ ಪ್ರಯೋಜನವಿಲ್ಲ. ಐದು ನಿಮಿಷದ ಪ್ರಚಾರದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.
ನಾನು ಇನ್ನೂ ಪ್ರಮಾಣ ವಚನ ಸ್ವೀಕರಿಸಿಲ್ಲ. ಆದರೆ, ಈಗಲೇ ನಾನಾ ರೀತಿಯಲ್ಲಿ ಸಾಕಷ್ಟು ಆರೋಪಗಳನ್ನು ಮಾಡುತ್ತಿದ್ದು ಅದರ ಬಗ್ಗೆ ನಾನು ಗಮನ ನೀಡುವುದಿಲ್ಲ, ಒಗ್ಗಟ್ಟಾಗಿ ಕೆಲಸ ಮಾಡಿದರೆ ಎಂತಹ ಕೆಲಸವನ್ನಾದರೂ ಬೇಗ ಮಾಡಬಹುದು. ಈಗಾಗಲೇ ನಾನು ತಿಳಿದವರನ್ನು, ತಜ್ಞರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.