ಜೊಯಿಡಾ, ಮೇ29(Daijiworld News/SS): ತಾಲ್ಲೂಕಿನ ರಾಮನಗರದ ನಾಡಕಚೇರಿಯ ಕಂದಾಯ ನಿರೀಕ್ಷಕ ಎ.ವಿ.ಪಾಟೀಲ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ.
ಶೈಲಾ ಸೋಲೇಕರ ಎಂಬುವವರು ತಮ್ಮ ಜಮೀನಿನ ವಾಟಣಿ ಮಾಡಿಕೊಡುವಂತೆ ನಾಡ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಹಲವು ಬಾರಿ ಭೇಟಿ ನೀಡಿದ್ದರೂ ಕೆಲಸವಾಗಿರಲಿಲ್ಲ. ಈ ದಾಖಲೆ ಮಾಡಿಕೊಡಲು 3 ಸಾವಿರ ಲಂಚ ಕೊಡುವಂತೆ ಎ.ವಿ.ಪಾಟೀಲ ಬೇಡಿಕೆ ಇಟ್ಟಿದ್ದರು.
ಈ ವಿಚಾರ ತಿಳಿದ ಕಾಳಿ ಬ್ರಿಗೇಡ್ ಸಂಚಾಲಕ ರವಿ ರೇಡಕರ ಹಾಗೂ ವಕೀಲ ಸುನೀಲ ದೇಸಾಯಿ ಎಸಿಬಿಗೆ ದೂರು ನೀಡಿದ್ದರು. ಈ ಮಾಹಿತಿ ಮೇರೆಗೆ ಕೂಲಿ ಕಾರ್ಮಿಕ ಮಹಿಳೆಯಿಂದ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲೇ ಅಧಿಕಾರಿಗಳು ದಾಳಿ ನಡೆಸಿದರು. ಡಿವೈಎಸ್ಪಿ ಎಸ್.ವಿ.ಗಿರೀಶ ನೇತೃತ್ವದ ಎಸಿಬಿ ತಂಡ ಆರೋಪಿಯನ್ನು ಬಂಧಿಸಿದೆ.
ಶೈಲಾ ಅವರ ಪತಿ ಭೀಮಾ ಸೋಲೇಕರ ಪಾರ್ಶ್ವವಾಯು ಪೀಡಿತರಾಗಿದ್ದಾರೆ. ಕುಟುಂಬ ನಿರ್ವಹಣೆಗೆ ಮಾಡಿದ ಸಾಲವನ್ನು ತೀರಿಸಲು ತಮ್ಮ ಜಮೀನಿನ ವಿಭಾಗಪತ್ರ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು.